ಸೋಮವಾರಪೇಟೆ, ಏ. 1: ಸಮೀಪದ ಬೇಳೂರು ಗ್ರಾ.ಪಂ. ವ್ಯಾಪ್ತಿಯ ವಸತಿ ರಹಿತರಿಗೆ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಕಾರ್ಯಾದೇಶ ಪತ್ರ ವಿತರಿಸಲಾಯಿತು.

ಬಸವ ವಸತಿ ಯೋಜನೆಯಡಿ 12 ಮಂದಿಗೆ ಸರ್ಕಾರದಿಂದ ಮನೆ ಮಂಜೂರಾಗಿದ್ದು, ತಲಾ ರೂ. 1,31,800 ಅನುದಾನ ಲಭಿಸಲಿದೆ. ಅಂಬೇಡ್ಕರ್ ವಸತಿ ಯೋಜನೆಯಡಿ 10 ಮಂದಿ ಫಲಾನುಭವಿಗಳಿಗೆ ವಸತಿ ಮಂಜೂರಾಗಿದ್ದು, ತಲಾ ರೂ. 1,64,800 ಅನುದಾನ ಲಭಿಸಲಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್ ತಿಳಿಸಿದರು.

ಬಡವರಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಈ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಬಾರದು.

ಗುಣಮಟ್ಟದ ಮನೆ ನಿರ್ಮಿಸಿ ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂದು ಗ್ರಾ.ಪಂ.ನ ಹಿರಿಯ ಸದಸ್ಯ ಕೆ.ಎ. ಯಾಕೂಬ್ ಕಿವಿಮಾತು ಹೇಳಿದರು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಸದಸ್ಯರುಗಳಾದ ವೀಣಾ, ಕವಿತ, ರಾಜು, ಸುಜಾತ, ಕೆ.ಪಿ. ಹರೀಶ್, ಶಶಿಕಲಾ, ಮೀನಾ, ಮಂಜುಳಾ, ಆನಂದ್, ಯೋಗೇಂದ್ರ, ವೀಣಾ ಅರ್ಜುನ್, ಸುಭದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಕೇಶವಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.