ಸೋಮವಾರಪೇಟೆ: ಸಮೀಪದ ತಾಕೇರಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನದ ಮೂರನೇ ವರ್ಷದ ವಾರ್ಷಿಕೋತ್ಸವ ಜರುಗಿತು. ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ವಿವಿಧ ಸೇವೆಗಳು, ಪೂಜಾ ಕೈಂಕರ್ಯಗಳು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು.

ಚಂಡೆ ವಾದ್ಯ ಹಾಗೂ ನಾದಸ್ವರ ವಾದನದೊಂದಿಗೆ ಪೂಜಾ ಕೈಂಕರ್ಯಗಳು ಆರಂಭವಾದವು. ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ರಾಜೇಂದ್ರಶಾಸ್ತ್ರಿ ಬೆಳ್ಳಾರೆ ಪೌರೋಹಿತ್ಯದಲ್ಲಿ ಪೂಜಾ ವಿಧಾನಗಳು ನೆರವೇರಿದವು. ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಶಾಸ್ತ್ರಿ ಅವರು ಉಪಸ್ಥಿತರಿದ್ದರು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಆರ್. ಮುತ್ತಣ್ಣ ಅವರನ್ನು ಸಮಿತಿ ವತಿಯಿಂದ ಇದೇ ಸಂದರ್ಭ ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ನೇತೃತ್ವವನ್ನು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಆರ್. ಮುತ್ತಣ್ಣ, ಉಪಾಧ್ಯಕ್ಷ ಎಸ್.ಪಿ. ಪೊನ್ನಪ್ಪ, ಕಾರ್ಯದರ್ಶಿ ರಾಮಯ್ಯ, ಈಶ್ವರ ದೇವರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎಂ. ಸುರೇಂದ್ರ, ಉಪಾಧ್ಯಕ್ಷ ಎಸ್.ಎಸ್. ಸುಬ್ಬಯ್ಯ, ಕಾರ್ಯದರ್ಶಿ ಲಿಂಗಪ್ಪ, ಪ್ರಮುಖರಾದ ಎಸ್.ಪಿ.ರಾಜು ಮತ್ತಿತರರು ವಹಿಸಿದ್ದರು.

ಮೂರ್ನಾಡು: ಸಮೀಪದ ಕಿಗ್ಗಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ತೆರೆ ಮಹಾ ಉತ್ಸವ ತಾ. 3 ರಂದು ಕೊಟ್ಟಿಹಾಡುವದು, 4 ರಂದು ಮೂರು ಗಂಟೆಗೆ ತಕ್ಕರ ಮನೆಯಿಂದ ಭಂಡಾರ ತೆಗೆದುಕೊಂಡು ಬಂದು ಅಂಬಲದಿಂದ ಬನಕ್ಕೆ ಎತ್ತುಪೋರಾಟದೊಂದಿಗೆ ಹೋಗಿ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ಕುಟ್ಟಿಚಾತ ತೆರೆ ಮತ್ತು ಇತರ ದೈವ ಪೂಜಾ ಕಾರ್ಯಗಳು ನಡೆಯಲಿದೆ. ಅಂದು ಸಾಯಂಕಾಲ ಅಂಬಲಕ್ಕೆ ಭಂಡಾರ ತಂದು ರಾತ್ರಿ 9 ಗಂಟೆಗೆ ಮೇಲೇರಿಗೆ ಬೆಂಕಿ ಕೊಡುವದು, ವಿಷ್ಣುಮೂರ್ತಿ ತೆರೆ (ಕೋಲ) ಮೇಲೇರಿ ಮತ್ತು ಅಂದೇ 11 ಗಂಟೆಗೆ ಕಿಗ್ಗಾಲು ಶ್ರೀ ಚಾಮುಂಡೇಶ್ವರಿ ದೇವಿಯ ದೊಡ್ಡ ಮುಡಿ ತೆರೆ ನಡೆಯಲಿದೆ.