ಮಡಿಕೇರಿ, ಏ. 3: ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಣೆಗಾಗಿ ಜಿಲ್ಲೆಯ ಇಬ್ಬರು ಸಿಬ್ಬಂದಿಗಳಿಗೆ ಈ ಬಾರಿಯ ಮುಖ್ಯಮಂತ್ರಿಗಳ ಪದಕ ಲಭಿಸಿದೆ.

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ವೈರ್‍ಲೆಸ್ ವಿಭಾಗದಲ್ಲಿ ಇನ್ಸ್‍ಪೆಕ್ಟರ್ ಆಗಿರುವ ಎನ್.ಟಿ. ಮಹಾದೇವ್ ಹಾಗೂ ಶ್ವಾನದಳ ಹಾಗೂ ಸ್ಪೋಟಕ ಪತ್ತೆದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಜಿತೇಂದ್ರ ರೈ ಕೆ.ಆರ್. ಅವರುಗಳು ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.

ನಿನ್ನೆ ನಡೆದ ಪೊಲೀಸ್ ಧ್ವಜದಿನಾಚರಣೆ ಸಂದರ್ಭ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧಕರಿಗೆ ಪ್ರಶಸ್ತಿ ವಿತರಿಸಿ ಗೌರವಿಸಿದರು.

ನಿಸ್ತಂತು ಜಾಲ (ವೈರ್‍ಲೆಸ್)ವನ್ನು ಸಮರ್ಪಕವಾಗಿ ನಿರ್ವಹಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೋರಿರುವ ಕಾರ್ಯ ಕ್ಷಮತೆಗಾಗಿ ಎನ್.ಟಿ. ಮಹಾದೇವ್ ಹಾಗೂ ಕರ್ತವ್ಯ ದಕ್ಷತೆ ಹಾಗೂ ಕ್ರೀಡೆಯಲ್ಲಿ ಮಾಡಿದ ಸಾಧನೆಗಾಗಿ ಜಿತೇಂದ್ರ ರೈ ಅವರುಗಳು ಮುಖ್ಯ ಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ರಾಜ್ಯದ 117 ಸಿಬ್ಬಂದಿಗಳು ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜಿಲ್ಲೆಯ ಇಬ್ಬರು ಇದರಲ್ಲಿದ್ದಾರೆ.