ಸುಂಟಿಕೊಪ್ಪ, ಏ. 2: ಕಾಡಾನೆಗಳ ಹಿಂಡು ಪ್ರತಿ ದಿನ ರಾತ್ರಿ ತೋಟಕ್ಕೆ ಲಗ್ಗೆಯಿಡುತ್ತಿರುವದರಿಂದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ, ಕಾಜೂರು, ಯಡವನಾಡು ವಿಭಾಗದ ಜನತೆ ಭಯಭೀತರಾಗಿದ್ದಾರೆ.

ಏಳೆಂಟು ಕಾಡಾನೆಗಳು ಪ್ರತಿನಿತ್ಯ ತೋಟದ ಬೇಲಿಗಳನ್ನು ಮುರಿದು ಒಳನುಗ್ಗಿ ಹಲಸಿನ ಕಾಯಿ, ಬಾಳೆ, ಅಡಿಕೆ ಮರವನ್ನು ಕಿತ್ತು ತಿನ್ನುತ್ತಾ ಗ್ರಾಮದ ಎಲ್ಲೆಂದರಲ್ಲಿ ಅಡ್ಡಾಡಿಕೊಂಡು ಹೋಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೋವರ್‍ಕೊಲ್ಲಿ ಟಾಟಾ ಎಸ್ಟೇಟ್‍ನಲ್ಲೂ ಈ ಕಾಡಾನೆಗಳ ಹಿಂಡು ಸಂಜೆ ವೇಳೆ ಪ್ರತ್ಯಕ್ಷವಾಗುತ್ತಿದ್ದು, ರಾತ್ರಿ ವೇಳೆ ಸೋಮವಾರಪೇಟೆಯಿಂದ ಐಗೂರು ಕಡೆಗೆ ವಾಹನದಲ್ಲಿ ಬರುವ ಪ್ರಯಾಣಿಕರು ಜೀವ ಭಯದಲ್ಲೇ ಪ್ರಯಾಣಿಸುವಂತಾಗಿದೆ ಎಂದು ತಿಳಿಸಿದ್ದಾರೆ. ಇತ್ತ ಅರಣ್ಯಾಧಿಕಾರಿಗಳು ನಿಗಾವಹಿಸುವಂತೆ ಒತ್ತಾಯಿಸಿದ್ದಾರೆ.