ಕುಶಾಲನಗರ, ಏ. 3: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಪಂಚಾಯ್ತಿ ಕಚೇರಿ ಹಾಗೂ ಮಳಿಗೆಗಳನ್ನು ನಿರ್ಮಿಸಲು 5 ಕೋಟಿ ರೂ. ಗಳ ಸಾಲ ಪಡೆಯುವ ನಿಟ್ಟಿನಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಎಂ.ಎಂ.ಚರಣ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಹಳೆಯ ಪಂಚಾಯಿತಿ ಕಚೇರಿಯನ್ನು ಕೆಡವಿ ಅಂದಾಜು 10 ಕೋಟಿ ರೂ. ಗಳ ವೆಚ್ಚದಲ್ಲಿ ಈ ಬೃಹತ್ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ಅಧ್ಯಕ್ಷ ಚರಣ್ ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭ ಪಟ್ಟಣದ ಕಸ ವಿಲೇವಾರಿಗೆಂದು ಮೀಸಲಿರಿಸಿರುವ ಭುವನಗಿರಿ ಕಸ ವಿಲೇವಾರಿ ಘಟಕದಲ್ಲಿ ನೆರೆಯ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಸ ತಂದು ಹಾಕುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸವನ್ನು ಇದೇ ಕೇಂದ್ರದಲ್ಲಿ ವಿಲೇವಾರಿ ಮಾಡುತ್ತಿದ್ದು ಅನವಶ್ಯಕ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಸಭೆ ನಿರ್ಧರಿಸಿತು. ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಗೆ ನದಿ ತಟದಲ್ಲಿ ಕೆಲವರು ಅಡ್ಡಿ ಮಾಡುತ್ತಿರುವ ಬಗ್ಗೆ ಕಾನೂನು ಕ್ರಮಕೈಗೊಳ್ಳಲು ಸಭೆ ನಿರ್ಣಯ ಕೈಗೊಂಡಿತು.

ನದಿಯ ಬಫರ್ ಜೋನ್ ವ್ಯಾಪ್ತಿಯಲ್ಲಿ ಒಳಚರಂಡಿ ಪೈಪ್‍ಗಳನ್ನು ಅಳವಡಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಇದೇ ಸಂದರ್ಭ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಸ್ಥಳೀಯ ಕೆಬಿ ಕಾಲೇಜು ಸಮೀಪ ತೆರಳಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರಯ್ಯಭಾನು ಮತ್ತು ಸದಸ್ಯರುಗಳು ಇದ್ದರು.