ಕುಶಾಲನಗರ, ಏ. 3: ಕಾವೇರಿ ನಿಸರ್ಗಧಾಮ ಮತ್ತು ಹಾರಂಗಿ ಜಲಾಶಯ ಬಳಿ ಟ್ರೀಪಾರ್ಕ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವದೇ ಅವ್ಯವಹಾರ ನಡೆದಿಲ್ಲ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅವರು ಕಾವೇರಿ ನಿಸರ್ಗಧಾಮದಲ್ಲಿ ಸುದ್ದಿಗಾರರೊಂದಿಗೆ ಈ ವಿಷಯ ಸ್ಪಷ್ಟಪಡಿಸಿದ್ದು ಇಲಾಖೆಯ ನಿಯಮಾನುಸಾರ ಕಾಮಗಾರಿ ಅಭಿವೃದ್ಧಿಯಲ್ಲಿದೆ ಎಂದು ವಿವರಿಸಿದ್ದಾರೆ.

ಕಾವೇರಿ ನಿಸರ್ಗಧಾಮದ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಟೆಂಡರ್‍ನಲ್ಲಿ ಯಾರೂ ಭಾಗವಹಿಸಿರಲಿಲ್ಲ. ನಂತರ ಇಲಾಖೆಯ ನಿಯಮಾನುಸಾರ ರೂ. 1 ಕೋಟಿ 12 ಲಕ್ಷದ 50 ಸಾವಿರ ಮೊತ್ತದ ಕಾಮಗಾರಿ ನಡೆಯುತ್ತಿದ್ದು ನಿಸರ್ಗಧಾಮದ ಪ್ರವೇಶದ್ವಾರದಲ್ಲಿ ಆವರಣ ಗೋಡೆ, ರಸ್ತೆ ನಿರ್ಮಾಣ, ತೂಗುಸೇತುವೆ ನಿರ್ವಹಣೆ, ಕಾಟೆಜ್‍ಗಳ ನಿರ್ಮಾಣ, ನಿಸರ್ಗ ಧಾಮದ ಒಳಭಾಗದಲ್ಲಿ ಹಸಿರೀಕರ ಣಕ್ಕಾಗಿ ಪೈಪ್‍ಲೈನ್ ಅಳವಡಿಕೆ ಮುಂತಾದ ಕಾಮಗಾರಿಗಳು ನಡೆಯುತ್ತಿವೆ ಎಂದು ಮಡಿಕೇರಿ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ತಿಳಿಸಿದ್ದಾರೆ. ತೂಗುಸೇತುವೆ ನಿರ್ವಹಣೆ ಕಾಮಗಾರಿ ಈಗಾಗಲೆ ಪೂರ್ಣಗೊಂಡಿದ್ದು ಉಳಿದಂತೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

ಹಾರಂಗಿ ಟ್ರೀಪಾರ್ಕ್ ಟೆಂಡರ್ ಪ್ರಕ್ರಿಯೆ ನಡೆದಿದ್ದು ನವೀನ್‍ಕುಮಾರ್ ಎಂಬ ಗುತ್ತಿಗೆದಾರರು 30 ಲಕ್ಷ ರೂಗಳ ಕಾಮಗಾರಿ ನಡೆಸಿದ್ದಾರೆ. ಅಂದಾಜು 100 ಎಕರೆ ಜಾಗದಲ್ಲಿ ಈಗಾಗಲೆ ಇರುವ ಶ್ರೀಗಂಧ ಮರಗಳ ರಕ್ಷಣೆಯೊಂದಿಗೆ ಔಷಧಿ ವನ ನಿರ್ಮಾಣ ಮಾಡಲಾಗುತ್ತಿದೆ. ಹಾರಂಗಿ ಟ್ರೀಪಾರ್ಕ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಅವರು ಹೇಳಿದ್ದಾರೆ.

ಕಾವೇರಿ ನಿಸರ್ಗಧಾಮದ ಒಳಭಾಗದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ನಿಯಮಬಾಹಿರವಾಗಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪ್ರಕರಣಗಳನ್ನು ಪತ್ತೆಹಚ್ಚಿ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆದು ಅಂಗಡಿ ಮುಂಗಟ್ಟುಗಳನ್ನು ನೀಡಲು ಕ್ರಮಕೈಗೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭ ಮಾಹಿತಿ ನೀಡಿದ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಈ ಹಿಂದೆ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರ ನೀಡಿದ್ದ 37.5 ಲಕ್ಷ ರೂಗಳು ವಾಪಾಸಾಗಿದ್ದು ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ನಿಯಮಾನುಸಾರ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಕಾವೇರಿ ನಿಸರ್ಗಧಾಮದಲ್ಲಿ ಪ್ರವಾಸಿಗರಿಗೆ ವಿಶೇಷ ಕಲಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ನಿಸರ್ಗ ಧಾಮದ ಒಳಭಾಗದಲ್ಲಿ ಹಸಿರೀಕರಣಕ್ಕೆ ಹನಿ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕೊಡಗಿನ ಸಂಸ್ಕøತಿ ಬಿಂಬಿಸುವ ಸ್ಥಬ್ಧಚಿತ್ರಗಳನ್ನು ಅಳವಡಿಸಲಾಗಿದೆ. ಜಿಂಕೆವನಕ್ಕೆ ತೆರಳುವ ರಸ್ತೆಯನ್ನು ಆಧುನೀಕರಣ ಗೊಳಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಧಾಮದ ಒಳಭಾಗದಲ್ಲಿ ಸೇರಿಕೊಂಡಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಪ್ರವಾಸಿಗರಿಗೆ ಹಲವು ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.