ವೀರಾಜಪೇಟೆ, ಏ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಇಂದು ಆಯೋಜಿಸಿದ್ದ ಖಾಸಗಿ ಬಸ್ಸು ನಿಲ್ದಾಣದ ವಾಹನ ನಿಲುಗಡೆ ಶುಲ್ಕ ವಸೂಲಾತಿ ಬಿಡ್ ವಾರ್ಷಿಕ ರೂ 1,30,000ಕ್ಕೆ ಹರಾಜುಗೊಂಡಿದೆ. ಇದನ್ನು ಜಿಲ್ಲಾಧಿಕಾರಿಯ ಅನುಮೋದನೆಗೆ ಕಳುಹಿಸಲು ಪಟ್ಟಣ ಪಂಚಾಯಿತಿ ತೀರ್ಮಾನಿಸಿತು.

ವೀರಾಜಪೇಟೆಯ ಪುರಭವನದಲ್ಲಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಹರಾಜಿನಲ್ಲಿ ಸರಕಾರ ನಿಗಧಿ ಪಡಿಸಿದ ನಿರೀಕ್ಷಿತ ಆದಾಯದ ಬಿಡ್‍ಗೆ ವಾಹನ ಸುಂಕ ಎತ್ತಾವಳಿ ತಲುಪದ ಕಾರಣ ಈ ಬಿಡ್ ಅನ್ನು ಒಪ್ಪುವ ಅಥವಾ ತಿರಸ್ಕರಿಸುವ ನಿರ್ಧಾರವನ್ನು ಜಿಲ್ಲಾಧಿಕಾರಿಗೆ ಬಿಡಲಾಗಿದೆ. ಕಳೆದ ಎರಡು ಬಾರಿಯಿಂದಲೂ 2017-18ರ ವಾಹನ ಸುಂಕ ಎತ್ತಾವಳಿಯಲ್ಲಿ ಪಟ್ಟಣ ಪಂಚಾಯಿತಿಗೆ ನಿರೀಕ್ಷಿತ ಬಿಡ್ ಬಾರದ ಕಾರಣ ಹರಾಜನ್ನು ಮುಂದೂಡಲಾಗಿತ್ತು. ಕಳೆದ 2016-17 ರಲ್ಲಿ ಇದೇ ವಾಹನ ಸುಂಕ ಎತ್ತಾವಳಿ ಹಾಗೂ ಪೇ ಪಾರ್ಕಿಂಗ್‍ಗೆ ವಾರ್ಷಿಕ ರೂ 2,51,000ಕ್ಕೆ ಹರಾಜಾಗಿದ್ದು ಪಟ್ಟಣ ಪಂಚಾಯಿತಿಗೂ ನಿರೀಕ್ಷಿತ ಆದಾಯ ಬಂದಿತ್ತು.

ಹರಾಜು ಪ್ರಕ್ರಿಯೆಯಲ್ಲಿ ಪಂಚಾಯಿತಿ ಸದಸ್ಯರುಗಳು, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಸಿಬ್ಬಂದಿಗಳು ಭಾಗವಹಿಸಿದ್ದರು.