ನಾಪೆÇೀಕ್ಲು, ಏ. 2: ಪ್ರಧಾನಿ ನರೇಂದ್ರ ಮೋದಿ ಅಲೆ ಕಾಂಗ್ರೆಸ್ ವಿರೋಧದ ನಡುವೆಯೂ ಬಿರುಗಾಳಿ ಎಬ್ಬಿಸುತ್ತಿದೆ. ಅದರೊಂದಿಗೆ ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತದ ಕನಸು ಜನತೆಯ ಹುಬ್ಬೇರಿಸುತ್ತಿದೆ.

ಕಕ್ಕಬ್ಬೆ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಕಾಮಗಾರಿ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಯ ಸಂದರ್ಭ ವಾದ್ಯ ಗೋಷ್ಠಿ, ಜಯಕಾರದೊಂದಿಗೆ ಕಾಂಗ್ರೆಸ್‍ನ ಹಲವು ಮುಖಂಡರು, ಕಾರ್ಯಕರ್ತರು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವದು ಇದಕ್ಕೆ ಸಾಕ್ಷಿ.

ಕಳೆದ 20 ವರ್ಷಗಳಿಂದ ಕಕ್ಕಬ್ಬೆ ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿದ್ದ ಬಡಕಡ ಸುರೇಶ್ ಬೆಳ್ಯಪ್ಪ, ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಾಂಡಂಡ ನರೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪರದಂಡ ಪ್ರಮಿಳಾ ಪೆಮ್ಮಯ್ಯ, ಚೋಂದಮ್ಮ, ಕಾಂಗ್ರೆಸ್ ಮುಖಂಡ ಪರದಂಡ ಸ್ವೀಟಾ ಪೆಮ್ಮಯ್ಯ, ಅಂಜಪರವಂಡ ರವಿ ಚೋಮುಣಿ, ಕಲ್ಯಾಟಂಡ ರಘು ತಮ್ಮಯ್ಯ, ಅಲ್ಲಾರಂಡ ಸನ್ನು ಅಯ್ಯಪ್ಪ, ಪರದಂಡ ಲಾಲಾ ಅಯ್ಯಣ್ಣ, ಪರದಂಡ ಸದಾ ನಾಣಯ್ಯ, ಬಡಕಡ ದೀನಾ ಪೂವಯ್ಯ, ಸೋಮಯ್ಯ, ರಮೇಶ್, ಅರೆಯಡ ರತ್ತು ಚಂಗಪ್ಪ, ಕಾಂಡಂಡ ಸುನಿಲ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸರೋಜಿನಿ, ಅಪ್ಪಾರಂಡ ವಿಜು ಕಾಳಪ್ಪ, ವಿವೇಕ್ ಕಾಳಪ್ಪ, ಮಾದಂಡ ಜಗದೀಶ್, ಕಣಿಯರ ನಾಣಯ್ಯ, ಗ್ರಾಮ ಪಂಚಾಯಿತಿ ಮಾಜಿ, ಹಾಲಿ ಸದಸ್ಯರು, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಮತ್ತು ಹಾಲಿ ನಿರ್ದೇಶಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ನಾಯಕರು ಕಾರ್ಯಕರ್ತರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಕೊಡಗಿನ ಕುಲದೇವ ಶ್ರೀ ಇಗ್ಗುತ್ತಪ್ಪ ಸನ್ನಿಧಿ ಬಳಿಯ ಕಕ್ಕಬ್ಬೆಯಲ್ಲಿ ಚಾಲನೆ ದೊರೆತಿರುವದು ಸಂತಸ ತಂದಿದೆ ಎಂದರು.

ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತ ಹಾಗೂ ಪ್ರಧಾನಿ ನರೇಂದ್ರ ಮೋದಿಯ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇಷ್ಟು ಜನರು ಸೇರ್ಪಡೆಗೊಂಡಿರುವದು ಜಿಲ್ಲೆಗೆ, ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಪ್ರಧಾನಿಗಳ ಸಿದ್ಧಾಂತದಂತೆ ನಾವೆಲ್ಲರು ಒಂದು. ಯಾರೂ ಮೇಲು ಕೀಳು ಎಂಬ ಭಾವನೆ ಬೇಡ. ಒಗ್ಗಟ್ಟಿನಿಂದ ಜಿಲ್ಲೆಯ, ರಾಜ್ಯದ, ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.

ನಂಜನಗೂಡು ಉಪ ಚುನಾವಣೆಯ ಬಗ್ಗೆ ಮಾತನಾಡಿದ ಅವರು ಆ ಪ್ರದೇಶದಲ್ಲಿ ಕುಡಿಯಲು ನೀರಿಲ್ಲದೆ ಖಾಲಿ ಕೊಡ ಪ್ರದರ್ಶನವಾಗುತ್ತಿದೆ. ಕಾಂಗ್ರೆಸ್ ದುರಾಡಳಿತಕ್ಕೆ ಜನರು ರೋಸಿ ಹೋಗಿದ್ದಾರೆ. ಯುವ ಪೀಳಿಗೆ ಬಿಜೆಪಿಯತ್ತ ಮುಖ ಮಾಡಿದೆ. ಇದೇ ಪರಿಸ್ಥಿತಿ ರಾಜ್ಯದ ಎಲ್ಲೆಡೆಯೂ ಗೋಚರಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಆಪ್ತರೆನಿಸಿದ ಹಲವು ಸಚಿವರು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದರ ವಿರುದ್ಧವೂ ಹೋರಾಟ ಮಾಡಬೇಕಾಗಿದೆ ಎಂದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಸಮಿತಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ ಪ್ರಧಾನಿಯ ಕನಸಿಗೆ ಕಕ್ಕಬ್ಬೆಯಿಂದ ಚಾಲನೆ ದೊರೆತಿದೆ. ಇದು ಜಿಲ್ಲೆಗೆ ಮಾದರಿ. ಕಕ್ಕಬ್ಬೆ ಪಂಚಾಯಿತಿಯನ್ನು ಕಾಂಗ್ರೆಸ್ ಮುಕ್ತ ಪಂಚಾಯಿತಿ ಮಾಡಬೇಕಾಗಿದೆ. ಒಳ್ಳೆಯ ಗುಣ, ಚಾರಿತ್ರ್ಯ ಹೊಂದಿರುವ ವ್ಯಕ್ತಿಗಳು ಬಿಜೆಪಿಗೆ ಸೇರ್ಪಡೆಗೊಂಡಿರುವದು ಸಂತಸ ತಂದಿದೆ ಎಂದರು.

ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಉದಿಯಂಡ ಸುರಾ ನಾಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಶಾಸಕರ ಪ್ರಯತ್ನದಿಂದ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳು ಪೂರ್ಣಗೊಂಡಿದೆ. ಇನ್ನೂ ಕೆಲಸಗಳು ಬಾಕಿ ಉಳಿದಿದೆ. ನಾಲಡಿ ಗ್ರಾಮದ ರಸ್ತೆ ಕಾಮಗಾರಿಯಲ್ಲಿ 1.5 ಕಿ.ಮೀ ರಸ್ತೆ ಕಾಮಗಾರಿ ಉಳಿಕೆಯಾಗಿದ್ದು, ಮಳೆಗಾಲದ ಮುನ್ನ ಈ ಕಾಮಗಾರಿ ಮುಗಿಸಲು ಹಣ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಕ್ಕಬ್ಬೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಲಿಯಂಡ ಸುನಂದಾ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ಮಡಿಕೇರಿ ತಾಲೂಕು ಆರ್‍ಎಂಸಿ ಉಪಾಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ, ಸದಸ್ಯೆ ಮಂಡೀರ ಹೇಮಾ ನಂಜಪ್ಪ, ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ, ಅಂಜಪರವಂಡ ರವಿ ಚೋಮುಣಿ ಇದ್ದರು.

ಶ್ರೀ ರಕ್ಷಾ ಪ್ರಭಾಕರ್ ಪ್ರಾರ್ಥನೆ, ಕಕ್ಕಬ್ಬೆ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಅಂಜಪರವಂಡ ಕುಶಾಲಪ್ಪ ಸ್ವಾಗತ, ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ನಿರೂಪಿಸಿ ವಂದಿಸಿದರು.

ಇದಕ್ಕೂ ಮೊದಲು 3.50 ಕೋಟಿ ರೂ. ವೆಚ್ಚದಲ್ಲಿ ಕಕ್ಕಬ್ಬೆ ನಾಲಡಿ ನಿರ್ಮಿಸಲಾದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಕಾಮಗಾರಿಯನ್ನು ಹಾಗೂ ಕುಂಜಿಲ ಗ್ರಾಮದ ಕಲ್ಯಾಟಂಡ ಐನ್‍ಮನೆಗೆ 3.50 ಲಕ್ಷ ರೂ.ಗಳಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಾಯಿತು.

-ಪಿ.ವಿ. ಪ್ರಭಾಕರ್