ಮಡಿಕೇರಿ, ಏ. 3: ಮಳೆಯ ಅಭಾವದ ನಡುವೆ ಬಿಸಿಲು ಹೆಚ್ಚಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಆಸ್ಪತ್ರೆಗಳ ವೈದ್ಯ - ಸಿಬ್ಬಂದಿ ಸದಾ ಜಾಗ್ರತೆ ವಹಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ನಿರ್ದೇಶಕರು, ಎಲ್ಲಾ ಜಿಲ್ಲೆಗಳ ಕುಟುಂಬ ಕಲ್ಯಾಣ ಅಧಿಕಾರಿಗಳು, ಶಸ್ತ್ರ ಚಿಕಿತ್ಸಕರು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಹಾಗೂ ತಾಲೂಕು ಆಸ್ಪತ್ರೆಗಳ ಆಡಳಿತ ವೈದ್ಯಾಧಿಕಾರಿಗಳಿಗೆ ಸುತ್ತೋಲೆ ರವಾನಿಸಿದ್ದಾರೆ.ಬೇಸಿಗೆಯ ತಾಪ ಹೆಚ್ಚುತ್ತಿರುವ ದರಿಂದ ಜನರಲ್ಲಿ ‘ಹೀಟ್-ಸ್ಟ್ರೋಕ್' ಹಾಗೂ ಚರ್ಮ ಸಂಬಂಧಿತ ರೋಗಗಳು ಕಾಣಿಸಿಕೊಳ್ಳಲಿದ್ದು, ಇಂತಹ ಸಂದರ್ಭ ಜನತೆಯ ಆರೋಗ್ಯ ಕಾಪಾಡುವ ದಿಸೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆಯೂ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಪರೀತ ತಾಪದಿಂದ ಹೊಳೆಗಳಲ್ಲಿ ನೀರಿನ ಹರಿಯುವಿಕೆಯ ವೇಗ ಕಡಿಮೆಯಾಗುವ ಸಂದರ್ಭ, ಅಂತಹ ನೈಸರ್ಗಿಕ ನೀರಿನ ನೇರ ಬಳಕೆಯಿಂದ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಆಯಾ ಜಿಲ್ಲೆಗಳ ಎಲ್ಲಾ ಕುಡಿಯುವ ನೀರಿನ ಮಾದರಿಗಳನ್ನು ಕಡ್ಡಾಯ ಪರೀಕ್ಷೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ.

ಜಿಲ್ಲಾಮಟ್ಟದ ಆರೋಗ್ಯ ಅಧಿಕಾರಿಗಳು, ವೈದ್ಯರು, ತಜ್ಞರುಗಳು ಈ ಬಗ್ಗೆ ನಿಗಾವಹಿಸಿ, ಟ್ಯಾಂಕರ್‍ಗಳಲ್ಲಿ ಪೂರೈಸುವ ನೀರನ್ನು ಕೂಡ ಪರೀಕ್ಷೆಗೆ ಒಳಪಡಿಸಿ, ಕ್ಲೋರಿನೇಷನ್ ಮಾಡಬೇಕೆಂದು ಸುತ್ತೋಲೆಯಲ್ಲಿ ಗಮನ ಸೆಳೆಯಲಾಗಿದೆ.

ಮಾತ್ರವಲ್ಲದೆ ಆಸ್ಪತ್ರೆಗಳಲ್ಲಿ ತುರ್ತು ಸೇವೆಗೆ ಅಗತ್ಯವಾದ ಓಆರ್‍ಎಸ್, ಐ.ವಿ. ದ್ರವ ಹಾಗೂ ಸಾಕಷ್ಟು ಔಷಧಿಗಳನ್ನು ದಾಸ್ತಾನು ಇರಿಸಿಕೊಂಡು ಅನಾರೋಗ್ಯದಿಂದ ಆಸ್ಪತ್ರೆಗೆ ಬರುವವರನ್ನು ಸಮರ್ಪಕವಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಮೂಲಕ, ಅನಿವಾರ್ಯವೆಂದಲ್ಲಿ ಒಳರೋಗಿ ಗಳಾಗಿ ದಾಖಲಿಸಿಕೊಳ್ಳುವಂತೆಯೂ ರಾಜ್ಯ ನಿರ್ದೇಶಕರು ಆದೇಶಿಸಿದ್ದಾರೆ.

ಸಮಸ್ಯೆಯ ಲಕ್ಷಣಗಳು

ಬಿಸಿಲಿನ ತಾಪದಿಂದ ಚರ್ಮ ಕೆಂಪಾಗುವದು, ಬೆವರಿನ ಪ್ರಮಾಣ ಕಡಿಮೆ ಅಥವಾ ದೇಹದ ಉಷ್ಣತೆ ಅಧಿಕಗೊಳ್ಳುವದು, ದೀರ್ಘವಾದ ಉಸಿರಾಟದಲ್ಲಿ ತೀವ್ರತೆ ಕಾಣಿಸಿಕೊಳ್ಳುವದು ಮುಂತಾದ ವೇಳೆ ವೈದ್ಯರನ್ನು ಸಂಪರ್ಕಿಸಲು ಜನತೆಗೆ ಸಲಹೆ ನೀಡಲಾಗಿದೆ.

ವಹಿಸಬೇಕಾದ ಕಾಳಜಿ

ಬಿಸಿಲಿನ ತಾಪದಿಂದ ಪಾರಾಗಲು ತೆಳುವಾದ ವಸ್ರ್ತ ಧರಿಸುವದು, ಗದ್ದೆ - ತೋಟಗಳಲ್ಲಿ ದುಡಿಮೆಯ ವೇಳೆ ಕೈಗೆಟಕುವಂತೆ ಸದಾ ಕುಡಿಯುವ ನೀರು ಇಟ್ಟುಕೊಳ್ಳುವದು, ಉಪ್ಪು - ಸಕ್ಕರೆ ಮಿಶ್ರಿತ ಪಾನೀಯ ಸೇವಿಸುವದು, ಕಡ್ಡಾಯವಾಗಿ ಬಿಸಿಮಾಡಿ ಆರಿಸಿದ ನೀರನ್ನೇ ಬಳಸುವದು, ನೀರುಮಜ್ಜಿಗೆ, ಎಳನೀರು ಸೇವಿಸಲು ಸಲಹೆ ನೀಡಲಾಗಿದೆ.

ಅಪಾಯದ ಲಕ್ಷಣ

ತೊಂದರೆಗೆ ಸಿಲುಕಿದವರು ತೊದಲು ಮಾತು ಅಥವಾ ಅರ್ಥ ರಹಿತ ಬಡಬಡಿಸುವಂತಾದರೆ, ತಕ್ಷಣ ನೆರಳಿನಲ್ಲಿ ಮಲಗಿಸಿ ಕಾಲುಗಳನ್ನು ಮೇಲೆ ಎತ್ತಬೇಕು. ಗಂಡು ಅಥವಾ ಹೆಣ್ಣು ಯಾರೇ

(ಮೊದಲ ಪುಟದಿಂದ) ಆಗಿದ್ದರೂ ಈ ವೇಳೆ ಹಣೆ, ಕತ್ತು, ತೊಡೆಯ ಸಂದುಗಳು ಹಾಗೂ ಪಾದಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. ಅಗತ್ಯವೆಂದರೆ ಹತ್ತಿರದ ವೈದ್ಯರ ಭೇಟಿ ಅಥವಾ 108ಕ್ಕೆ ಕರೆ ಮಾಡಿ ನೆರವು ಪಡೆಯಬೇಕು.

ಪ್ರಥಮ ಚಿಕಿತ್ಸೆ

ತೊಂದರೆಗೆ ಒಳಗಾಗುವ ಸಂದರ್ಭ ಪಾದರಕ್ಷೆ ಅಥವಾ ವಸ್ತ್ರಗಳು ಬಿಗಿಯದಂತೆ ಮೊದಲು ಸಡಿಲಿಸಿ ಮುಖಕ್ಕೆ ನೀರು ಸಿಂಪಡಿಸಬೇಕು. ತಂಗಾಳಿ ಬೀಸುವಂತೆ ನೋಡಿ ಕೊಳ್ಳಬೇಕು. ಪ್ರಜ್ಞೆಯಿಲ್ಲದೆ ಹೋದರೆ ಪ್ರಜ್ಞೆ ಮರುಕಳಿಸಿದಾಗ ಶುದ್ಧ ನೀರನ್ನು ಕುಡಿಯಲು ಕೊಡಬೇಕು. ತಕ್ಷಣ ಯಾವದೇ ಔಷಧಿ ನೀಡಬಾರದು.

ಬಿಸಿಲಿನಿಂದ ಬಳಲಿ ಸುಸ್ತಾದವರನ್ನು ತೀರಾ ತಣ್ಣಗಿನ ನೀರಿನಿಂದ ಒರೆಸಬಾರದು. ಇಂತಹÀ ಸಂದರ್ಭ ದೇಹದ ಹೊರ ಪದರದ ರಕ್ತನಾಳಗಳು ಸಂಕುಚಿತವಾಗಿ, ದೇಹದ ಒಳಗಿನ ಉಷ್ಣತೆ ಶರೀರದಲ್ಲೇ ಬಂಧಿಸಲ್ಪಟ್ಟು ಅಂಗಾಂಗಗಳು ನಿಷ್ಕ್ರಿಯಗೊಳ್ಳುವ ಸಂಭವ ಎದುರಾದೀತು ಎಂದು ಮುನ್ಸೂಚನೆ ನೀಡಲಾಗಿದೆ. ಈ ಮೇಲಿನ ಮುಂಜಾಗ್ರತಾ ಕ್ರಮಗಳೊಂದಿಗೆ ಜನತೆಯ ಆರೋಗ್ಯ ಕಾಪಾಡಲು ಆದ್ಯತೆ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿರುವ ರಾಜ್ಯ ನಿರ್ದೇಶಕರು, ಅಪಾಯದ ಸಂದರ್ಭಗಳಲ್ಲಿ ಸಮಯೋಚಿತ ಹಾಗೂ ಪ್ರಜ್ಞಾಪೂರ್ವಕ ಕ್ರಮಗಳಿಂದ ಪ್ರಾಣ ಉಳಿಸಲು ಕಾಳಜಿ ತೋರುವಂತೆಯೂ ಕಿವಿಮಾತು ಹೇಳಿದ್ದಾರೆ.

ಪರಿಸರವೇ ಕಾರಣ

ಬಿಸಿಲಿನ ಧಗೆಯ ನಡುವೆ ನಮ್ಮ ಪರಿಸರವೇ ಎಲ್ಲಾ ತೊಂದರೆಗಳನ್ನು ಸೃಷ್ಟಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀ ರಂಗಪ್ಪ ಅಭಿಪ್ರಾಯಪಟ್ಟಿದ್ದಾರೆ. ನಾವು ಬಳಸುವ ನೀರಿನೊಂದಿಗೆ ಕಲುಷಿತ ಜಲ ಮಿಶ್ರಣದಿಂದಲೇ ಅನೇಕ ರೋಗಗಳಿಗೆ ಕಾರಣವಾಗಲಿದ್ದು, ಮನೆ - ಕಚೇರಿಗಳ ಸುತ್ತ ಮುತ್ತ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಲು ಸಲಹೆ ಮಾಡಿದ್ದಾರೆ.

ಸಾಮಾನ್ಯವಾಗಿ ಕರಳುಬೇನೆ, ಅತಿಸಾರ, ವಿಷಮಶೀತ, ಎಕೃತ್‍ನಂತ ಸೋಂಕುಗಳು ಜಲ ಮಾಲಿನ್ಯದಿಂದ ಎದುರಾಗಲಿದ್ದು, ಕಳೆದ ಸಾಲಿಗಿಂತ ಪ್ರಸಕ್ತ ಇಂತಹ ತೊಂದರೆಗೆ ಜನ ಹೆಚ್ಚಾಗಿ ಸಿಲುಕಿರುವ ಮಾಹಿತಿ ಲಭ್ಯವಿದೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದ್ದು, ಸಾಕಷ್ಟು ಪ್ರಮಾಣದಲ್ಲಿ ಶುದ್ಧವಾದ ಮತ್ತು ಕಾಯಿಸಿ ಆರಿಸಿದ ನೀರನ್ನೇ ಕುಡಿಯುವಂತೆ ಜನತೆಯಲ್ಲಿ ವಿನಂತಿಸಿದ್ದಾರೆ.