ಮಡಿಕೇರಿ, ಏ. 3: ಗ್ರಾಮೀಣ ಜನತೆ ಕೊಡಗಿನಲ್ಲಿ ಮಳೆ-ಗಾಳಿಗೆ ಸಿಲುಕಿ, ಮುಂಗಾರು ಸಂದರ್ಭ ತಿಂಗಳುಗಟ್ಟಲೆ ವಿದ್ಯುತ್ ಸಮಸ್ಯೆ ಎದುರಿಸಿದರೆ, ಬೇಸಿಗೆಯ ದಿನಗಳಲ್ಲಿ ವಿದ್ಯುತ್ ಸಂಪರ್ಕ ಸುಗಮ ಗೊಳಿಸಲು ಹಣ ನೀಡುತ್ತಾ ಕಾರ್ಯ ಕೈಗೂಡದೆ ಹೈರಾಣ ರಾಗುತ್ತಿರುವ ಕುರಿತು ಆರೋಪಗಳು ಕೇಳಿ ಬರುತ್ತಿದೆ.ಬೇರೆ ಬೇರೆ ಸಂದರ್ಭಗಳಲ್ಲಿ ತುಂಡಾಗಿರುವ ಅಥವಾ ಹಾನಿ ಗೊಂಡಿರುವ ಒಂದು ವಿದ್ಯುತ್ ಕಂಬ ಬದಲಾಯಿಸಬೇಕಾದರೆ, ಗ್ರಾಮಸ್ಥರಿಂದ ಅಥವಾ ಗ್ರಾಹಕರಿಂದ ರೂ. ಆರೆಂಟು ಸಾವಿರ ಪಡೆಯುತ್ತಿರುವ ಕುರಿತು ತಿಳಿದು ಬಂದಿದೆ.ಈಚೆಗೆ ಐಕೊಳ ಗ್ರಾಮದಲ್ಲಿ ಆರೆಂಟ್ ವಿದ್ಯುತ್ ಕಂಬಗಳನ್ನು ಅಳವಡಿಸಲು ಅಲ್ಲಿನ ನಿವಾಸಿಗಳು ರೂ. 25 ಸಾವಿರಕ್ಕೂ ಅಧಿಕ ಮೊತ್ತ ಪಾವತಿಸಲು ಕೆಲವರು ಬೇಡಿಕೆಯಿಟ್ಟಿದ್ದು, ವಿದ್ಯುತ್ ಸಂಪರ್ಕದ ಅನಿವಾರ್ಯತೆಗಾಗಿ ಗ್ರಾಮದ ಫಲಾನುಭವಿಗಳು ಹಣ ಸಂಗ್ರಹಿಸಿ ಸಂಬಂಧಪಟ್ಟವರಿಗೆ ತಲಪಿಸಿದ್ದಾರೆ.

ಇನ್ನು ಮರಗೋಡು ಸಮೀಪದ ಹುಲಿತಾಳ ಗ್ರಾಮದಲ್ಲಿ ವಿದ್ಯುತ್ ವೋಲ್ಟೇಜ್ ಇಲ್ಲದೆ ಬವಣೆ ಪಡುತ್ತಿರುವ ನಿವಾಸಿಗಳು ಒಂದು ಕಂಬ ಸಹಿತ ಟ್ರಾನ್ಸ್‍ಫಾರ್ಮರ್ ಅಳವಡಿಸಲು ರೂ. 17 ಸಾವಿರಕ್ಕೂ ಅಧಿಕ ಹಣ ನೀಡಬೇಕಾಯಿತು ಎಂದು ನೋವು ತೋಡಿಕೊಂಡಿದ್ದಾರೆ.

ಇಂತಹ ಗುರುತರ ಆರೋಪಗಳ ಬಗ್ಗೆ ಗುತ್ತಿಗೆದಾರರೊಬ್ಬರು ಅಭಿಪ್ರಾಯ ನೀಡುತ್ತಾ, ಇಲಾಖೆಯಿಂದ ನೀಡುವ ಹಣದಿಂದ ಯಾವದೇ ಕಾಮಗಾರಿ ಪೂರೈಸಲು ಸಾಧ್ಯವಾಗುತ್ತಿಲ್ಲವೆಂದು ಸಮಜಾಯಿಷಿಕೆ ನೀಡಿದ್ದು, ಅನಿವಾರ್ಯವಾಗಿ ಜನರಿಂದ ಸಂಗ್ರಹಿಸಿ ಹಣ ಪಡೆದುಕೊಳ್ಳುತ್ತಿರು ವದಾಗಿ ಸಮರ್ಥನೆ ನೀಡಿದ್ದಾರೆ.

ಇಲಾಖೆ ಹೇಳುವದೇ ಬೇರೆ

ಚೆಸ್ಕಾಂ ಮೂಲಗಳ ಪ್ರಕಾರ ವಿದ್ಯುತ್ ಕಂಬಗಳು ಸೇರಿದಂತೆ ಬೇಕಾಗುವೆಲ್ಲ ಉಪಕರಣಗಳನ್ನು ಇಲಾಖೆಯಿಂದ ಪೂರೈಸಲಾಗುತ್ತಿದೆ. ಈ ಹಿಂದೆ ಪ್ರತಿಯೊಂದು ವಿದ್ಯುತ್ ಕಂಬ ಅಳವಡಿಸಲು ಚೆಸ್ಕಾಂನಿಂದ ರೂ. 600 ರಿಂದ

(ಮೊದಲ ಪುಟದಿಂದ) 700 ಮೊತ್ತ ಸಂಬಂಧಿಸಿದ ಗುತ್ತಿಗೆ ದಾರರಿಗೆ ಪಾವತಿಸಲಾಗುತ್ತಿದೆ. ಪ್ರಸಕ್ತ ಈ ಮೊತ್ತ ರೂ. ಒಂದು ಸಾವಿರದಂತೆ ನೀಡಲಾಗುತ್ತಿದೆ.

ಕೊಡಗಿನಲ್ಲಿ ಸರಕಾರದಿಂದ ಸಿಬ್ಬಂದಿಯನ್ನು ಒದಗಿಸದೆ ಬಯಲು ಸೀಮೆಯ ನಿಯಮ ಗಳಂತೆ ಕನಿಷ್ಟ ಕೆಲಸಗಾರರನ್ನು ನಿಯೋಜಿಸುವ ಪರಿಣಾಮ, ಕೆಲಸ ಮಾಡಲು ಕಷ್ಟವಾಗಿದೆ. ಮಾತ್ರವಲ್ಲದೆ ಗುಡ್ಡಗಾಡುಗಳಲ್ಲಿ ಮೈಲುಗಟ್ಟಲೆ ದೂರ ಪ್ರದೇಶದಲ್ಲಿ ಒಂದಿಬ್ಬರು ಸಿಬ್ಬಂದಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಜನರಿಂದ ಹಣ ಪಡೆಯುತ್ತಿದ್ದರೆ ಅದು ತಪ್ಪು. ಕಾಡಾನೆಗಳ ಹಾವಳಿ ತಡೆಗೂ ಚೆಸ್ಕಾಂ ನಿಂದ ‘ಕಾರಿಡಾರ್’ ನಿರ್ಮಿಸಿಕೊಡ ಲಾಗುತ್ತಿದ್ದು, ಈ ಉಚಿತ ಕೆಲಸಕ್ಕೂ ಹಣ ಪಡೆಯುತ್ತಿರುವ ಆರೋಪವಿದೆ. ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಇಂತಹ ಸಂದರ್ಭ ಇಲಾಖೆ ಯೊಂದಿಗೆ ಗಮನಕ್ಕೆ ತರುವಂತೆಯೂ ಪ್ರತಿಪಾದಿಸುತ್ತಾರೆ.

ವಾಸ್ತವದಲ್ಲಿ ‘ಚೆಸ್ಕಾಂ’ಗೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಕೊಡಗಿನ ಹವಾಮಾನವನ್ನು ಅರ್ಥೈಸಿಕೊಂಡು ಸಮರ್ಪಕ ರೀತಿ ಕೆಲಸ ನಿರ್ವಹಿಸಲು ಜನಪ್ರತಿನಿಧಿಗಳು ಕೂಡ ಸರಕಾರದ ಗಮನ ಸೆಳೆಯಬೇಕಿದೆ. ಇತ್ತೀಚೆಗೆ ಕೇಂದ್ರ ಸರಕಾರದಿಂದ ವಿದ್ಯುತ್ ಉಳಿತಾಯ ದೃಷ್ಟಿಯಿಂದ ಖಾಸಗಿ ವಲಯದಿಂದ ವಿತರಿ ಸುತ್ತಿರುವ ರೂ. 65 ಮೌಲ್ಯದ ಬಲ್ಬುಗಳು ಕೂಡ ಕಾಳಸಂತೆಯಲ್ಲಿ ರೂ. 100 ರಂತೆ ಮಾರಾಟ ಗೊಳ್ಳುತ್ತಿರುವ ಆರೋಪವಿದೆ. ಬೆರಳೆಣಿಕೆ ಸಿಬ್ಬಂದಿ ಕಟ್ಟಿಕೊಂಡು ತಾವೇನು ಮಾಡಲಾದೀತು, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳ ಗಮನ ಸೆಳೆದರೂ, ಕೊಡಗಿಗೆ ಅಗತ್ಯವಿರುವಷ್ಟು ಸಿಬ್ಬಂದಿ ನಿಯೋಜಿಸುತ್ತಿಲ್ಲವೆಂದು ಎಲ್ಲ ಆರೋಪಗಳ ಬಗ್ಗೆಯೂ ಅಧಿಕಾರಿಗಳು ಕೈಚೆಲ್ಲುತ್ತಿದ್ದಾರೆ.

-ಶ್ರೀಸುತ