ಮಡಿಕೇರಿ, ಏ. 3: ಸಮಾಜಕ್ಕೆ ಉತ್ತಮ, ಸೂಕ್ತ ಮತ್ತು ಸಮಯೋಚಿತ ಸೇವೆ ನೀಡುವದು ರೋಟರಿ ಸದಸ್ಯರ ಮುಖ್ಯ ಗುರಿಯಾಗಿರಬೇಕು ಎಂದು ರೋಟರಿ ಜಿಲ್ಲೆ 3181 ರ ನಿಯೋಜಿತ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕುಶಾಲನಗರ ರೋಟರಿ ಕ್ಲಬ್ ಆಯೋಜಿಸಿದ್ದ ರೋಟರಿ ವಲಯ 6ಕ್ಕೆ ಸೇರಿದ ರೋಟರಿ ಕ್ಲಬ್‍ಗಳ ಮುಂದಿನ ಸಾಲಿನ ಅಧ್ಯಕ್ಷ, ಕಾರ್ಯದರ್ಶಿ, ವಿವಿಧ ಸೇವಾ ಯೋಜನೆಗಳ ನಿರ್ದೇಶಕರುಗಳಿಗೆ ಆಯೋಜಿಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಾದ್ಯಂತ ಸಾಮಾಜಿಕ ಸಂಘಟನೆಯಾಗಿ ಖ್ಯಾತವಾಗಿರುವ ರೋಟರಿಯ ಮಹತ್ವವನ್ನು ಜನರಿಗೆ ತಿಳಿಸುವಲ್ಲಿ ರೋಟರಿ ಸದಸ್ಯರು ಕಾರ್ಯೋನ್ಮುಖರಾಗುವಂತೆ ಕರೆ ನೀಡಿದರು.

ಮುಂದಿನ ಸಾಲಿನ ಜಿಲ್ಲಾ ಬುಲೆಟಿನ್ ಎಡಿಟರ್ ಬಿ.ಜಿ. ಅನಂತಶಯನ ಮಾತನಾಡಿ, ಹಿರಿಯ ಸದಸ್ಯರು ಕಿರಿಯರಿಗೆ ಸೂಕ್ತ ಮಾಹಿತಿ, ಮಾಗದರ್ಶನದ ಮೂಲಕ ಬೆಳೆಸಬೇಕು. ಹಿರಿಯ ಸದಸ್ಯರು ತಾಯಿಬೇರಿನಂತೆ ಕಾರ್ಯನಿರ್ವಹಿಸಬೇಕು. ರೋಟರಿಯ ಸಾಮಾಜಿಕ ಕಳಕಳಿ ಎಲ್ಲೆಡೆ ಸದಸ್ಯರಿಂದ ಧನ್ನಿತವಾಗಲಿ ಎಂದು ಹಾರೈಸಿದರು.

ಮುಂದಿನ ಸಾಲಿನ ಜಿಲ್ಲಾ ಸಮ್ಮೇಳನಾಧ್ಯಕ್ಷ ದೇವಣೀರ ಕಿರಣ್ ಮಾತನಾಡಿ, ರೋಟರಿ ಕ್ಲಬ್‍ಗಳು ಸಭೆಗಳನ್ನು ನಡೆಸುವ ವಿಧಾನದ ಬಗ್ಗೆ ಸಮರ್ಪಕ ಮಾಹಿತಿ ನೀಡಿದರು. ಸಭೆಗಳು ಆದಷ್ಟು ಚುಟುಕಾಗಿರಲಿ ಎಂದು ಸಲಹೆ ನೀಡಿದರು. ಮುಂದಿನ ಸಾಲಿನ ಸಾರ್ಜೆಂಟ್ ಅಟ್ ಆಮ್ರ್ಸ್ ದೇವಣೀರ ತಿಲಕ್ ಮಾತನಾಡಿ, ಸಾರ್ಜೆಂಟ್ ಅಟ್ ಆಮ್ರ್ಸ್‍ಗೆ ಅಧ್ಯಕ್ಷರಷ್ಟೇ ನಿಯಂತ್ರಣದ ಅಧಿಕಾರ ಸಭಾ ಕಾರ್ಯಕ್ರಮಗಳ ನಿರ್ವಹಣೆಯಲ್ಲಿದೆ ಎಂದರು.

ವೀರಾಜಪೇಟೆಯ ಡಾ. ಎಸ್.ವಿ. ನರಸಿಂಹನ್ ಭಾಷಣ ಕಲೆ ಬಗ್ಗೆ ಮಾಹಿತಿ ನೀಡಿ ಕೇಳುಗರ ತಾಳ್ಮೆ ಪರೀಕ್ಷಿಸದೇ ಮಾತನಾಡುವದು ಒಂದು ಅಪೂರ್ವ ಕಲೆಯಾಗಿದ್ದು ಇದನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಸಲಹೆ ನೀಡಿದರು.

ಡಾ. ಚಂದ್ರಶೇಖರ್ ಹೊಸ ಕ್ಲಬ್‍ಗಳ ರಚನೆ ಮತ್ತು ಯುವ ಪೀಳಿಗೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ಲಬ್‍ಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕಾರ್ಯಕ್ರಮ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್ ಮೈ ರೋಟರಿ ವೆಬ್‍ಸೈಟ್ ಮತ್ತು ರೋಟರಿಯಲ್ಲಿ ನೂತನ ತಂತ್ರಜ್ಞಾನ- ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ತರಬೇತಿ ನೀಡಿದರು. ಅಸಿಸ್ಟೆಂಟ್ ಗವರ್ನರ್ ಡಾ. ಸಿ.ಆರ್. ಪ್ರಶಾಂತ್ ರೋಟರಿಯ ಟೀಚ್ ಕಾರ್ಯಕ್ರಮಗಳನ್ನು ಬೇರೆ ಬೇರೆ ಶಾಲೆಗಳಲ್ಲಿ ಹಮ್ಮಿಕೊಳ್ಳುವ ಬದಲಿಗೆ ಒಂದೇ ಶಾಲೆಯಲ್ಲಿ ಎಲ್ಲಾ ಯೋಜನೆಗಳನ್ನು ಹಮ್ಮಿಕೊಂಡರೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ರೋಟರಿ ಆರ್ಥಿಕ ಸಂಪನ್ಮೂಲಗಳ ಬಗ್ಗೆ ಮುಂದಿನ ಸಾಲಿನ ಜಿಲ್ಲಾ ಖಜಾಂಜಿ ಹಿರಿಯ ಲೆಕ್ಕ ಪರಿಶೋಧಕ ಗೋಪಾಲಕೃಷ್ಣ ವಿವರ ನೀಡಿದರು. ಮುಂದಿನ ಸಾಲಿನ ಅಸಿಸ್ಟೆಂಟ್ ಗವರ್ನರ್ ಮಹೇಶ್ ನಾಲ್ವಡೆ ಸ್ವಾಗತಿಸಿ, ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಎ.ಎ. ಚಂಗಪ್ಪ ನಿರೂಪಿಸಿ, ಕಾರ್ಯದರ್ಶಿ ಎನ್.ಜಿ. ಪ್ರಕಾಶ್ ವಂದಿಸಿದರು.

ಮಾಜಿ ಅಸಿಸ್ಟೆಂಟ್ ಗವರ್ನರ್ ಮಡಿಕೇರಿ ರೋಟರಿ ಕ್ಲಬ್‍ನ ಎಂ.ಎಸ್. ಮೋಹನ್ ಕರುಂಬಯ್ಯ ಅಂತರ್ರಾಷ್ಟ್ರೀಯ ರೋಟರಿ ಸೇವೆಗಳ ಬಗ್ಗೆ, ಹಿರಿಯ ರೋಟರಿ ಸದಸ್ಯ ಪಿರಿಯಾಪಟ್ಟಣ ರೋಟರಿ ಕ್ಲಬ್‍ನ ಜವರೇಗೌಡ ಸಮೂಹ ಸೇವೆಗಳ ಬಗ್ಗೆ, ಮಡಿಕೇರಿ ಮಿಸ್ಟಿಹಿಲ್ಸ್ ಸದಸ್ಯ, ಮುಂದಿನ ಸಾಲಿನ ಜಿಲ್ಲಾ ಖಜಾಂಚಿ ಲೆಕ್ಕಪರಿಶೋಧಕ ಗೋಪಾಲಕೃಷ್ಣ ನೂತನ ತಂಡಕ್ಕೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ರೋಟರಿ, ಮಿಸ್ಟಿಹಿಲ್ಸ್, ವೀರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆ, ಕುಶಾಲನಗರ, ಶನಿವಾರಸಂತೆ, ಪಿರಿಯಾಪಟ್ಟಣ, ಹುಣಸೂರು ರೋಟರಿ ಕ್ಲಬ್‍ಗಳ ಮುಂದಿನ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.