ಶ್ರೀಮಂಗಲ, ಏ. 2: ದ. ಕೊಡಗಿನ ಕುಟ್ಟ ಗ್ರಾ.ಪಂ.ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ 11 ಕೆ. ವಿ.ಹೈಟೆನ್ಶನ್ ವಿದ್ಯುತ್ ಮಾರ್ಗದ ತಂತಿ ತುಂಡಾಗಿ ಎಲ್.ಟಿ. ವಿದ್ಯುತ್ ಮಾರ್ಗದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಶಾರ್ಟ್ ಸಕ್ರ್ಯುಟ್ ಸಂಭವಿಸಿ ಒಂದು ಮನೆ ಸಂಪೂರ್ಣ ಬೆಂಕಿಗೆ ಆಹುತಿ ಯಾಗಿದೆ. ಈ ಮಾರ್ಗದಲ್ಲಿ 5 ಮನೆಗಳಿಗೆ ಹಾನಿಯಾಗಿದೆ ಹಾಗೂ ಮನೆಯಲ್ಲಿದ್ದ ಪೀಠೋಪಕರಣ, ಸಾಮಗ್ರಿಗಳು ಭಸ್ಮವಾಗಿವೆ. ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ.

ಮಂಚಳ್ಳಿ ಗ್ರಾಮದ ತೀತೀರ ದೀಪಕ್ ಮಾಚಯ್ಯ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಹೊಟ್ಟೆಂಗಡ ತಿಮ್ಮಯ್ಯ ಅವರು ವಾಸವಿದ್ದ ಮನೆ ವಿದ್ಯುತ್ ದುರಂತದಿಂದ ಟಿವಿ, ಫ್ರಿಡ್ಜ್, ಪೀಠೋಪಕರಣ, ಕಿಟಕಿ, ಬಾಗಿಲು, ಮೆಲ್ಚಾವಣಿಯ ಮರಮುಟ್ಟು, ಅಲ್ಮೆರಾ, ಬಟ್ಟೆ ಇತ್ಯಾದಿ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಇದೇ ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಬಿರುಕು ಬಿಟ್ಟಿದೆ.

ಈ ಮಾರ್ಗದ ತೀತೀರ ಬೆಳ್ಯಪ್ಪ, ತೀತೀರ ವಾಸು ಅಚ್ಚಯ್ಯ, ತೀತೀರ ಪಾರ್ಥ, ತೀತೀರ ರತ್ನ ಇವರ ಮನೆಗೂ ವ್ಯಾಪಕ ಹಾನಿಯಾಗಿದೆ. ಬೆಲೆಬಾಳುವ ಪೀಠೋಪಕರಣ, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳು ಸುಟ್ಟು ನಷ್ಟವಾಗಿದೆ.

ಅವಘಡ ಸಂಭವಿಸಿದ ಸಮಯದಲ್ಲಿ ತಿಮ್ಮಯ್ಯ ಹಾಗೂ ಪತ್ನಿ ಮನೆಯಲ್ಲಿ ಇರಲಿಲ್ಲ. ಇತರ ಮನೆಗಳಲ್ಲಿ ಅಪಾಯದ ಅರಿವಿನಿಂದ ಎಚ್ಚೆತ್ತುಕೊಂಡು ಮನೆಯ ‘ಫ್ಯೂಸ್’ ಕಿತ್ತು ಅನಾಹುತ ಹೆಚ್ಚಾಗುವದನ್ನು ತಪ್ಪಿಸಿದ್ದಾರೆ.

ಇದಲ್ಲದೆ ಮಂಚಳ್ಳಿಯ ಕಾವೇರಿ ಆಟೋ ಗ್ಯಾರೇಜ್‍ನ ವೆಲ್ಡಿಂಗ್ ಯಂತ್ರ ಸುಟ್ಟು ಹೋಗಿದೆ. ವಿದ್ಯುತ್ ಅವಘಡದಿಂದ ಮನೆಗೆ ಹೊತ್ತಿಕೊಂಡ ಬೆಂಕಿ ನಂದಿಸಲು ಅಗ್ನಿ ಶಾಮಕದಳಕ್ಕೆ ತಿಳಿಸಿದರೂ, ಸಕಾಲದಲ್ಲಿ ಬಾರದ ಹಿನ್ನಲೆಯಲ್ಲಿ ಸಮೀಪದ ತೀತೀರ ದೀಪಕ್ ಮಾಚಯ್ಯ ಅವರ ಕಾಫಿ ತೋಟದಿಂದ ಸ್ಪ್ರಿಂಕ್ಲ್ಲರ್ ಅಳವಡಿಸಿ, ಬೆಂಕಿ ನಂದಿಸಲಾಯಿತು. ಸಮೀಪದಿಂದ ಬೆಂಕಿ ನಂದಿಸಲು ಮುಂದಾಗುವ ಸಂದÀರ್ಭ ಮನೆಯೊಳಗಿದ್ದ ಸಿಲಿಂಡರ್ ಸ್ಫೋಟಗೊಳ್ಳುವ ಭೀತಿಯಿಂದ ನೀರು ಹಾಕಲಾಯಿತು.

ಸಾರ್ವಜನಿಕರ ಅಸಮಾಧಾನ: ಅನಾಹುತ ಸಂಭವಿಸಿರುವ ವಿದ್ಯುತ್ ಮಾರ್ಗ ತುಂಬ ಹಳೆಯದು. ವಿದ್ಯುತ್ ಕಂಬ ಹಾಗೂ ತಂತಿಗಳು ಶಿಥಿಲಗೊಂಡಿವೆ. ಈ ಹಿಂದೆಯೂ ಹಲವು ಬಾರಿ ಅವಘಡ ಸಂಭವಿಸಿದೆ. ಆದರೆ ಇಷ್ಟು ನಷ್ಟ ಉಂಟಾಗಿರಲಿಲ್ಲ. 11 ಕೆ.ವಿ. ಸಾಂದ್ರತೆಯ ಮಾರ್ಗ ವಿದ್ಯುತ್ ಕಂಬದಲ್ಲಿಯೆ ಎಲ್.ಟಿ. ಮಾರ್ಗದ ತಂತಿ ಕೊಂಡೊಯ್ಯ ಲಾಗಿದೆ. ಯಾವದೇ ಸುರಕ್ಷಿತ ಕ್ರಮ ಕೈಗೊಳ್ಳದೆ, ಇದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಜಿ.ಪಂ. ಸದಸ್ಯ ಶಿವು ಮಾದಪ್ಪ ಹಾಗೂ ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ ಭೇಟಿ ನೀಡಿ ಸೆಸ್ಕಾಂ ಅಧಿಕಾರಿ ಅಂಕಯ್ಯ ಅವರೊಂದಿಗೆ ಮತನಾಡಿ, ವಿದ್ಯುತ್ ಮಾರ್ಗದ ಲೋಪದೋಷ ಸರಿಪಡಿಸು ವಂತೆಯೂ ಹಾಗೂ ನಷ್ಟ ಪರಿಹಾರಕ್ಕೆ ಆಗ್ರಹಿಸಿದರು. ಈ ಸಂದರ್ಭ ಅಧಿಕಾರಿ ತಾ. 3 ರಂದು (ಇಂದು) ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡುವದಾಗಿ ತಿಳಿಸಿದರು.

ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಕುಟ್ಟ ಸಿ.ಐ. ದಿವಾಕರ್, ಎಸ್.ಐ. ರವಿಕಿರಣ್, ಶ್ರೀಮಂಗಲ ಚೆಸ್ಕಾಂ ಅಧಿಕಾರಿ ವಿಜಯಕುಮಾರ್ ಸಿಂಬಂದಿಗಳು ಮಹಜರು ನಡೆಸಿದರು.