ಸಿದ್ದಾಪುರ, ಏ. 2 : ಸಿದ್ದಾಪುರ ಗ್ರಾ.ಪಂ ನ 2017-18 ನೇ ಸಾಲಿನ ಮಾಂಸ, ಮೀನು ಮಾರಾಟದ ಹಾರಾಜು ಪ್ರಕ್ರಿಯೆ ವಿರುದ್ಧ ಕೆಲವರು ವ್ಯಾಪಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ಲೈಸನ್ಸ್ ಅವಧಿ ಮುಗಿದ ಅಂಗಡಿಗಳನ್ನು ಮುಚ್ಚಬೇಕೆಂದು ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಗ್ರಾ.ಪಂ. ಸದಸ್ಯರುಗಳು ಪೊನ್ನಂಪೇಟೆಯ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದರಲ್ಲದೆ, ಗ್ರಾ.ಪಂ ಕೈಗೊಂಡ ನಿರ್ಣಯಕ್ಕೆ ಪ್ರಾರಂಭದಿಂದಲೂ ಅಸಹಕಾರ ತೋರಿದ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಕೆಲ ಗ್ರಾಮಸ್ಥರು ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಮಾಂಸ ವ್ಯಾಪಾರಿಗಳ ಪರ ನಿಲ್ಲಬೇಡಿ ಎಂದು ಖಾರವಾಗಿ ನುಡಿದರು.

ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರ ಒತ್ತಡಕ್ಕೆ ಮಣಿದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಕೊನೆಗೂ ನ್ಯಾಯಲಯದ ಮೊರೆ ಹೋದ ವ್ಯಾಪಾರಿಗಳನ್ನು ಹೊರತುಪಡಿಸಿ ಇತರೆ ವ್ಯಾಪಾರಿಗಳ ಅವಧಿ ಮುಕ್ತಾಯವಾದ ಅಂಗಡಿಗಳನ್ನು ಮುಚ್ಚಬೇಕೆಂದು ಆದೇಶ ನೀಡಿದರು.

ಇಕ್ಕಟ್ಟಿನಲ್ಲಿ ಬಿಡ್ಡುದಾರರು!!

ಸಿದ್ದಾಪುರ ಗ್ರಾಮ 2017-18 ನೇ ಸಾಲಿಗೆ ಲೈಸನ್ಸ್ ರದ್ದುಪಡಿಸಿ, ಮಾರುಕಟ್ಟೆಯಲ್ಲಿ ನೂತನ ಮಳಿಗೆ ನಿರ್ಮಿಸಿ ಟೆಂಡರ್ ನಡೆಸಿತ್ತು. ಆದರೆ ಈ ಹಿಂದೆ ಲೈಸನ್ಸ್ ಪಡೆದ ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿದ್ದು, ಇದರಿಂದಾಗಿ ಲಕ್ಷಾಂತರ ರೂಗಳನ್ನು ನೀಡಿ ನೂತನ ಮಳಿಗೆ ಪಡೆದ ಬಿಡ್ಡುದಾರರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಗ್ರಾ.ಪಂ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.