ಕುಶಾಲನಗರ, ಏ. 3: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಲಾರಿ ಮಾಲೀಕರ ಮತ್ತು ಚಾಲಕರ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ. ಕುಶಾಲನಗರದಲ್ಲಿ ಕಾವೇರಿ ಲಾರಿ ಮಾಲೀಕರ ಸಂಘ ಮತ್ತು ಮಿನಿ ಲಾರಿ ಮಾಲೀಕರು, ಚಾಲಕರ ಸಂಘದ ಆಶ್ರಯದಲ್ಲಿ ಮುಷ್ಕರ ನಡೆಯುತ್ತಿದ್ದು ಸ್ಥಳೀಯ ಮಾರುಕಟ್ಟೆ ಆವರಣದಲ್ಲಿ ನೂರಾರು ಲಾರಿಗಳು ಮತ್ತು ಸರಕು ಸಾಗಾಟ ವಾಹನಗಳು ನಿಂತಿರುವ ದೃಶ್ಯ ಕಂಡುಬಂದಿದೆ.

ಸ್ಥಳೀಯ ಮ್ಯಾಕ್ಸಿ ಕ್ಯಾಬ್ ಮಾಲೀಕರು ಚಾಲಕರ ಸಂಘ, ಕುಶಾಲನಗರ ಕಾರು ಮಾಲೀಕರು ಚಾಲಕರ ಸಂಘ, ಆಟೋ ಚಾಲಕರು - ಮಾಲೀಕರ ಸಂಘ ಲಾರಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕಾವೇರಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಸಿ.ನಾಗರಾಜ್ ತಿಳಿಸಿದ್ದಾರೆ.

ನೆರೆಯ ಜಿಲ್ಲೆಗಳಿಂದ ಕುಶಾಲನಗರ ಮೂಲಕ ತೆರಳುವ ಸರಕು ಸಾಗಾಟ ವಾಹನಗಳನ್ನು ತಡೆಹಿಡಿದು ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಲಾಗಿದೆ ಎಂದು ಸಂಘದ ನಿರ್ದೇಶಕ ಸಿ.ಕೆ.ಮಹೇಶ್ ತಿಳಿಸಿದ್ದಾರೆ.

ಲಾರಿ ಮುಷ್ಕರದ ಹಿನ್ನಲೆಯಲ್ಲಿ ಸರಕು ಸಾಮಗ್ರಿಗಳನ್ನು ಸಾಗಾಟ ಮಾಡಲು ಅನಾನುಕೂಲವಾದ ಹಿನ್ನಲೆಯಲ್ಲಿ ವ್ಯಾಪಾರಸ್ಥರು ತೊಂದರೆಗೀಡಾಗಿದ್ದಾರೆ. ಗ್ರಾಹಕರಿಗೆ ಸಾಮಗ್ರಿಗಳನ್ನು ಕೊಂಡೊಯ್ಯಲು ಕೂಡ ಅನಾನುಕೂಲವಾಗಿದ್ದು ಬಹುತೇಕ ಕಾಮಗಾರಿಗಳು ಸ್ಥಗಿತಗೊಂಡಿರುವದು ಕಂಡುಬಂದಿದೆ.

ಕಳೆದ 5 ದಿನಗಳಿಂದ ಕುಶಾಲನಗರ ಮಾರುಕಟ್ಟೆ ಆವರಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೀಡುಬಿಟ್ಟಿರುವ ಪ್ರತಿಭಟನಾಕಾರರು ಎಲ್ಲಾ ವಾಹನಗಳ ಚಾಲಕರು ಮಾಲೀಕರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿರುವದಾಗಿ ಸಂಘದ ಅಧ್ಯಕ್ಷ ಜಿ.ಸಿ.ನಾಗರಾಜ್ ತಿಳಿಸಿದ್ದಾರೆ.