ಮಡಿಕೇರಿ, ಏ. 3: ಇಂದಿನಿಂದ ಒಂದು ವಾರಗಳ ಕಾಲ ಕಣಿವೆ ಶ್ರೀ ರಾಮಲಿಂಗೇಶ್ವರ ಜಾತ್ರೆ ಆರಂಭಗೊಂಡಿದೆ. ಇಂದು ಸನ್ನಿಧಿ ಯಲ್ಲಿ ದೇವನಾಂದಿ ಅಂಕುರಾರ್ಪಣೆ, ರಕ್ಷಾ ಬಂಧನ, ಧ್ವಜಾರೋಹಣ, ನವಗ್ರಹ ಸ್ಥಾಪನೆ ಇತ್ಯಾದಿ ನೆರವೇರಿತು. ಈ ವಾರ್ಷಿಕ ಜಾತ್ರೆಗೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಐತಿಹಾಸಿಕ ಹಿನ್ನೆಲೆಯಂತೆ ದಕ್ಷಿಣಗಂಗೆ ಕಾವೇರಿ ನದಿಯ ದಂಡೆಯಲ್ಲಿರುವ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣ ಗೊಂಡ ಬಗ್ಗೆ ಪುರಾಣದಲ್ಲಿ ಐತಿಹ್ಯವಿದೆ. ರಾಮಾಯಣದಲ್ಲಿ ಸೀತಾಮಾತೆ ಅಪಹರಣಗೊಂಡ ಸಂದರ್ಭ ಸೀತೆಯನ್ನು ಹುಡುಕಿ ಕೊಂಡು ಆಂಜನೇಯ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಶ್ರೀರಾಮ ಕಣಿವೆ ಪ್ರದೇಶಕ್ಕೆ ಬಂದ ಸಂದರ್ಭ ಇಲ್ಲಿನ ರಮಣೀಯ ದೃಶ್ಯವನ್ನು ನೋಡಿ ಆನಂದಿಸಿ ಇಲ್ಲಿಯೆ ಕೆಲಕಾಲ ವಿಶ್ರಮಿಸಿ ಮುಂದೆ ಸಾಗಿದನೆಂದು ಹೇಳಲಾಗುತ್ತದೆ.

ಇಲ್ಲಿನ ಸರೋವರದ ದಡದಲ್ಲಿ ಈ ಮೊದಲೇ ತಪಸ್ಸಿಗೆ ತೊಡಗಿದ್ದ ವ್ಯಾಘ್ರ ಮಹರ್ಷಿಗಳು ಶ್ರೀರಾಮನಿಗೆ ಆಜ್ಞೆ ಮಾಡಿ ‘ನೀನು ಇಲ್ಲಿಗೆ ಬಂದ ನೆನಪಿಗಾಗಿ ಹಾಗೂ ತನ್ನ ಪೂಜಾ ಕೈಂಕರ್ಯಗಳಿಗೆ ಅವಶ್ಯವಿರುವ ಶಿವಲಿಂಗವನ್ನು ತರಲು ಆಂಜನೇಯನನ್ನು ಶ್ರೀರಾಮ ಕಾಶಿಗೆ ಕಳುಹಿಸಿಕೊಡುತ್ತಾನೆ. ಆದರೆ ಆಂಜನೇಯ ಶಿವಲಿಂಗ ತರುವದು ವಿಳಂಬವಾದ ಕಾರಣ ಶ್ರೀರಾಮ ಇಲ್ಲಿಯೇ ಮರಳಿನಿಂದ ಶಿವಲಿಂಗ ವನ್ನು ಮಾಡಿ ಪೂಜಿಸಿ, ದೇವರನ್ನು ಪ್ರತಿಷ್ಠಾಪಿಸಿ ಇಲ್ಲಿಂದ ನಿರ್ಗಮಿಸುತ್ತಾನೆ.

ಈ ಹಿನ್ನೆಲೆಯಲ್ಲಿ ಕಣಿವೆ ದೇವಸ್ಥಾನದಲ್ಲಿರುವ ಲಿಂಗವನ್ನು ಮರಳುಲಿಂಗ ಎಂದೇ ಕರೆಯ ಲಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಎಚ್.ಆರ್. ರಾಘವೇಂದ್ರ ಆಚಾರ್ ವಿವರಿಸುತ್ತಾರೆ.

ಶ್ರೀ ಆಂಜನೇಯ ತಂದ ಶಿವಲಿಂಗವನ್ನು ಶ್ರೀರಾಮ ಸನ್ನಿಧಿಯ ಹಿಂಬದಿಯಲ್ಲಿರುವ ಶ್ರೀ ಲಕ್ಷ್ಮಣೇಶ್ವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಉಲ್ಲೇಖವಿದೆ.

ಶ್ರೀರಾಮಲಿಂಗೇಶ್ವರ ಪ್ರತಿಷ್ಠಾಪನೆಯಾದ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಶ್ರೀರಾಮಪುರ ಎಂದು ನಾಮಕರಣ ಮಾಡಲಾಯಿತು. ಈ ಹೆಸರು ಇಂದಿಗೂ ಚಾಲ್ತಿಯಲ್ಲಿದೆ. ಈ ಗ್ರಾಮದಲ್ಲಿ ಬ್ರಾಹ್ಮಣರು, ವೀರಶೈವರು, ಮುಸಲ್ಮಾನರು ಹಾಗೂ ಕ್ರೈಸ್ತರು ಸಾಮರಸ್ಯ ಜೀವನ ನಡೆಸಿಕೊಂಡು ಬರುತ್ತಿದ್ದು, ಈ ಎಲ್ಲಾ ಧರ್ಮಿಯರು ಒಟ್ಟಾಗಿ ರಥೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ಹೇಳಿದರು.

ಶ್ರೀರಾಮಲಿಂಗೇಶ್ವರ ದೇವಸ್ಥಾನ ಸಮಿತಿಯಲ್ಲಿ ಹಿಂದೂಗಳಲ್ಲದೆ ಇತರ ಧರ್ಮಿಯರು ಪದಾಧಿಕಾರಿಗಳಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಈ ಗ್ರಾಮದಲ್ಲಿ ಯಾವದೇ ಮತೀಯ ಗಲಭೆಗಳಾಗಿಲ್ಲ. ಪ್ರತಿಯೊಬ್ಬರು ಪರಸ್ಪರ ಪ್ರೀತಿ, ವಾತ್ಸಲ್ಯ ಹಾಗೂ ಸಾಮರಸ್ಯದ ಜೀವನ ಕಂಡುಕೊಂಡಿದ್ದಾರೆ.

ದೇವತಾ ಕಾರ್ಯಗಳು

ತಾ. 4ರಂದು (ಇಂದು) ಬೆಳಿಗ್ಗೆ 8ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ, ಸಂಜೆ 6 ಸಂಧ್ಯಾಪೂಜೆ, ಪ್ರಸಾದ ವಿನಿಯೋಗ, 7ಕ್ಕೆ ಸೀತಾ ಕಲ್ಯಾಣೋತ್ಸವ, ಮಹಾಪೂಜೆ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ತಾ. 5ರಂದು ಬೆಳಿಗ್ಗೆ 8ಕ್ಕೆ ಪವಿತ್ರ ಗಂಗೋದಕರಿಂದ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ ಹಾಗೂ ಮಧ್ಯಾಹ್ನ 12 ಗಂಟೆಗೆ ಬ್ರಹ್ಮ ರಥೋತ್ಸವ ನಡೆಯಲಿದೆ.

ತಾ. 6ರಂದು ಬೆಳಿಗ್ಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ಸಹಸ್ರನಾಮಾರ್ಚನೆ, ಮಹಾಪೂಜೆ, ತೀರ್ಥ ಪ್ರಸಾದ ನಡೆಯಲಿದೆ. ರಾತ್ರಿ 8ಕ್ಕೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಬಸವೇಶ್ವರ ಉತ್ಸವ ನಡೆಯಲಿದೆ.

ತಾ. 7ರಂದು ಬೆಳಿಗ್ಗೆ 8ಕ್ಕೆ ಪಂಚಾಮೃತಾಭಿಷೇಕ, ಅಷ್ಟೋತ್ತರ ಸಹಸ್ರನಾಮಾರ್ಚನೆ, ಮಹಾಪೂಜೆ ಹಾಗೂ ರಾತ್ರಿ 7ಕ್ಕೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ಆಂಜನೇಯೋತ್ಸವ ನಡೆಯಲಿದೆ.

ತಾ. 8ರಂದು ಬೆಳಿಗ್ಗೆ 8ಕ್ಕೆ ಪಂಚಾಮೃತಾಭಿಷೇಕ, ಅಷ್ಟೋತ್ತರ ಸಹಸ್ರನಾಮಾರ್ಚನೆ, ಬಿಲ್ವಪತ್ರೆ ಅರ್ಚನೆ ಮಹಾಪೂಜೆ ಹಾಗೂ ರಾತ್ರಿ 8ಕ್ಕೆ ಪುಷ್ಪಾಲಂಕೃತ ಮಂಟಪದಲ್ಲಿ ಶ್ರೀ ಸ್ವಾಮಿಯ ಮೆರವಣಿಗೆ ಮತ್ತು ಆಕರ್ಷಕ ಮದ್ದುಗುಂಡು ಪ್ರದರ್ಶನ, ತೆಪ್ಪೋತ್ಸವ ಏರ್ಪಡಿಸಲಾಗಿದೆ.

ತಾ.9ರಂದು ಶ್ರೀ ಸ್ವಾಮಿಯ ಅವಭರತ ಸ್ನಾನ, ಮಹಾಪೂಜೆ ನಡೆಯಲಿದೆ.