ಸೋಮವಾರಪೇಟೆ, ಏ. 3: ಕಸ್ತೂರಿ ರಂಗನ್ ವರದಿ ಸಂಪೂರ್ಣ ಜಾರಿಯಾದಲ್ಲಿ ಕೊಡಗಿನ ಹಿತ್ತಕ್ಕೆ ಧಕ್ಕೆಯಾಗಲಿದ್ದು, ಕೂಡಲೇ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ಕರೆದು ಇದರ ಸಾಧಕ ಬಾಧಕಗಳನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ನಿರ್ಣಯ ಕೈಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಲುಪಿಸುವ ಕೆಲಸವಾಗಬೇಕೆಂದು ಶಾಸಕ ಅಪ್ಪಚ್ಚು ಹೇಳಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ 57 ಗ್ರಾಮಗಳನ್ನು ಈ ಯೋಜನೆಯಲ್ಲಿ ಗುರುತಿಸಲಾಗಿದೆ. ಪಕ್ಕದ ಕೇರಳ ರಾಜ್ಯದಲ್ಲಿ ಈ ವರದಿಗೆ ವಿರೋಧ ವ್ಯಕ್ತಪಡಿಸಿ, ಸಮಸ್ಯೆಗಳನ್ನು ತಿಳಿಯ ಪಡಿಸಿದ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿಯಿಂದ ಕೇರಳ ರಾಜ್ಯವನ್ನು ಹೊರಗಿಡಲಾಗಿದೆ ಎಂದರು.ಪ್ರಾಣಿ ಪಕ್ಷಿಗಳ ಉಳಿವಿನೊಂದಿಗೆ ಮನುಷ್ಯರೂ ಬದುಕಬೇಕಿದೆ. ಜಿಲ್ಲೆಯ ಜನರು ಪರಿಸರ ವಿರೋಧಿಗಳಲ್ಲ. ಆದರೆ, ಯುನೆಸ್ಕೋದವರು ಹಾಗೂ ಪರಿಸರವಾದಿಗಳ ಚಿತಾವಣೆಯಿಂದ ದೇಶದಲ್ಲಿ ಪಶ್ಚಿಮಘಟ್ಟದ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದನ್ನು ಸರ್ವ ಪಕ್ಷಗಳು ವಿರೋಧಿಸುವ ಮೂಲಕ ಯೋಜನೆಯ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ

(ಮೊದಲ ಪುಟದಿಂದ) ಅಧ್ಯಕ್ಷೆ ಪುಷ್ಪಾ ರಾಜೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.