ಮಡಿಕೇರಿ, ಏ. 2: ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕ್ರಿಕೆಟ್ ಸ್ಟೇಡಿಯಂ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಜಾಗ ವಿವಾದಕ್ಕೆ ಇದೀಗ ಮತ್ತೊಂದು ಹೊಸ ತಿರುವು ದೊರೆತಿದೆ. ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಮಂಜೂರು ಮಾಡಿರುವ ಜಾಗವನ್ನು ವಾಪಸ್ಸು ಪಡೆಯುವಂತೆ ಕೋರಿ ಸ್ಟೇಡಿಯಂ ಬದಲಾಗಿ ಇಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕೆಂದು ಹೋರಾಟ ನಡೆಸುತ್ತಿರುವವರ ಪರವಾಗಿ ತಡೆಯಾಜ್ಞೆ ಕೋರಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡದೆ ತಿರಸ್ಕರಿಸಿ. ಇದರಿಂದಾಗಿ ಸ್ಮಶಾನ ಜಾಗ ಬೇಕೆಂದು ನಡೆಯುತ್ತಿರುವ ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ.ಹೋರಾಟ ನಡೆಸುತ್ತಿರುವ ಸಂಘಟನೆಯ ಪ್ರಮುಖ ಮೊಣ್ಣಪ್ಪ ತಡೆಯಾಜ್ಞೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಾಲಯ ಮಾರ್ಚ್ 24 ರಂದು ಇದನ್ನು ನಿರಾಕರಿಸಿ ಆದೇಶ ಹೊರಡಿಸಿದೆ.

ಹೊದ್ದೂರು ಗ್ರಾಮದ ಸರ್ವೆ ನಂ 167/1ಎ ರಲ್ಲಿ 12.70 ಎಕರೆ ಪೈಸಾರಿ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಜಿಲ್ಲಾಡಳಿತದ ಮೂಲಕ ಮಂಜೂರು ಮಾಡಲಾಗಿತ್ತು. ಈ ಕುರಿತು ತಾ. 31.12.2015 ರಲ್ಲಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಇದೇ ಜಾಗದಲ್ಲಿ ದಲಿತರ ಸ್ಮಶಾನವಿದ್ದು, ಇದಕ್ಕೆ ತೊಂದರೆಯಾಗಲಿದೆ ಎಂದು ಮೊಣ್ಣಪ್ಪ ತಡೆಯಾಜ್ಞೆ ಕೋರಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮೊಣ್ಣಪ್ಪ ನ್ಯಾಯಾಲಯದ ತಡೆಯಾಜ್ಞೆ ದೊರೆತಿಲ್ಲ. ಈ ಆದೇಶದ ಪ್ರತಿ ದೊರೆತ ಬಳಿಕ ಮುಂದಿನ ಹೆಜ್ಜೆಯ ಕುರಿತು ತೀರ್ಮಾನಿಸಲಾಗುವದು. ಸ್ಮಶಾನ ಜಾಗ ಬಿಟ್ಟು ಬೇರೆ ಜಾಗದಲ್ಲಿ ಸ್ಟೇಡಿಯಂ ನಿರ್ಮಿಸಲು ಅಭ್ಯಂತರವಿಲ್ಲ ಎಂದಿದ್ದಾರೆ.

ವಸ್ತುಸ್ಥಿತಿಯ ಬಗ್ಗೆ ಸರಕಾರಕ್ಕೆ ವರದಿ: ಡಿ.ಸಿ

ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ವಾಗಬೇಕು ಎಂಬ ಒತ್ತಾಯ ಒಂದೆಡೆಯಿದ್ದರೆ ಇಲ್ಲಿ ಸ್ಮಶಾನ ಜಾಗ ಸೇರಿದ್ದು ಇದನ್ನು ಸ್ಟೇಡಿಯಂಗೆ ನೀಡಬಾರದೆಂಬ ಹೋರಾಟ ಇನ್ನೊಂದು ಗುಂಪಿನಿಂದ ಕಳೆದ ಹಲವು ಸಮಯಗಳಿಂದ ಮುಂದುವರಿದುಕೊಂಡು ಬರುತ್ತಿದೆ. ಈ ನಡುವೆ ಸ್ಟೇಡಿಯಂ ನಿರ್ಮಾಣಕ್ಕೆ ಪೊಲೀಸ್ ರಕ್ಷಣೆ ಕೋರಿ ಕ್ರಿಕೆಟ್ ಸಂಸ್ಥೆಯ ಪ್ರಮುಖರು ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. ಜಾಗದ ಗೊಂದಲವಿರುವದರಿಂದ ಈ ಬಗ್ಗೆ ಸೂಕ್ತ ನಿರ್ಧಾರ ತಿಳಿಸುವಂತೆ ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ಮನವಿ ಮಾಡಿರುವ ಬೆಳವಣಿಗೆಯೂ ಈ ನಡುವೆ ನಡೆದಿದೆ. ಈ ಹಿನ್ನೆಲೆಯಲ್ಲಿ ಈ ಜಾಗದ ವಿಚಾರ ಹಾಗೂ ಪ್ರಸ್ತುತದ ವಿಚಾರಗಳ ಬಗ್ಗೆ ವಸ್ತುಸ್ಥಿತಿಯನ್ನು ಸರಕಾರಕ್ಕೆ ತಿಳಿಸಿರುವದಾಗಿ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆಯ ಮಾಹಿತಿಯಂತೆ ಅಲ್ಲಿನ ವಸ್ತುಸ್ಥಿತಿ ಹೀಗಿದೆ.

(ಮೊದಲ ಪುಟದಿಂದ)

2009-10ರ ತನಕ ಈ ಪೈಸಾರಿ ಜಾಗ ಕಾಡಾಗಿದ್ದು, ಅರಣ್ಯ ಇಲಾಖೆ ನಿರ್ವಹಿಸಿಕೊಂಡು ಬರುತಿತ್ತು. ಗೂಗಲ್ ಸರ್ವೆಯಲ್ಲೂ ಇದನ್ನು ಗಮನಿಸಬಹುದು. 2012ರ ನಂತರ ಇಲ್ಲಿ ಈಗಿರುವ ನಿವಾಸಿಗಳು ನೆಲೆ ಕಂಡುಕೊಂಡಿದ್ದಾರೆ. 2012ಕ್ಕೆ ಮುಂಚಿತವಾಗಿ ಯಾವದೇ ದಾಖಲಾತಿಯೂ ಈ ನಿವಾಸಿಗಳ ಬಳಿ ಇಲ್ಲ. ಈ ಜಾಗದಲ್ಲಿ 253 ಕುಟುಂಬಗಳಿವೆ. ಈ ಪೈಕಿ 103 ದಲಿತ ಕುಟುಂಬ, 93 ಮುಸ್ಲಿಂ ಕುಟುಂಬ ಹಾಗೂ ಬಾಕಿ ಇತರರಿದ್ದಾರೆ. ಈ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆಂದು ಮುಸ್ಲಿಂ ಜನಾಂಗಕ್ಕೆ 1 ಎಕರೆ, ಕುಂಬಾರರಿಗೆ 70 ಸೆಂಟ್ ಹಾಗೂ ದಲಿತರಿಗೆ ಎರಡು ಎಕರೆ ಹಾಗೂ ಇತರರಿಗೆ ಎರಡು ಎಕರೆ ಜಾಗ ಪ್ರತ್ಯೇಕವಾಗಿ ಮೀಸಲಾಗಿದೆ. ಆದರೆ ಸ್ಟೇಡಿಯಂ ನಿರ್ಮಾಣಕ್ಕೆಂದು ಮಂಜೂರು ಮಾಡಿರುವ ಜಾಗದಲ್ಲಿ ಸುಮಾರು ಎರಡು ಎಕರೆಯಷ್ಟು ಜಾಗದಲ್ಲಿ ಸ್ಮಶಾನವಿರುವದಾಗಿ ಇಲ್ಲಿ ನೆಲೆಸಿರುವ ನಿವಾಸಿಗಳು ವಾದಿಸುತ್ತಿದ್ದಾರೆ. 2013ರ ಬಳಿಕ ನೆಲೆಸಿರುವ ಈ ನಿವಾಸಿಗಳು ಸುಮಾರು 40 ಎಕರೆ ಪೈಸಾರಿ ಜಾಗವನ್ನು ಬಳಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಿಸೋಜ, ಉಪವಿಭಾಗಾಧಿಕಾರಿ ನಂಜುಂಡೇಗೌಡ ಹಾಗೂ ತಹಶೀಲ್ದಾರ್ ಕುಸುಮ ಅವರುಗಳು ಮಾಹಿತಿ ನೀಡಿದರು.

ಹೊದ್ದೂರು ಪಂಚಾಯಿತಿಯ ಶೇ. 80 ರಷ್ಟು ಜನರು ಸ್ಟೇಡಿಯಂ ಪರವಾಗಿದ್ದಾರೆ. ಜಿಲ್ಲಾಡಳಿತ ಉಳ್ಳವರಿಗೆ ಒಂದು, ದಲಿತರಿಗೆ ಒಂದು ಎಂಬ ನಿಲುವು ತೋರುವದಿಲ್ಲ. ಸ್ಟೇಡಿಯಂ ಬಂದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂಬ ವಾದವೂ ಇದೆ. ಈ ಎಲ್ಲಾ ಅಂಶಗಳ ಬಗ್ಗೆ ಸರಕಾರಕ್ಕೆ ವರದಿ ನೀಡಿರುವದಾಗಿ ಜಿಲ್ಲಾಧಿಕಾರಿ ಡಿಸೋಜ ಅವರು ತಿಳಿಸಿದರು.