ವೀರಾಜಪೇಟೆ, ಏ, 3: ದಿನ ನಿತ್ಯ ಕೆಲಸದ ಒತ್ತಡ ಹಾಗೂ ಜಂಜಾಟದಲ್ಲಿರುವ ವಕೀಲರುಗಳಿಗೆ ಕ್ರೀಡೆಯಿಂದ ಮನೋಲ್ಲಾಸ ಹಾಗೂ ದೇಹದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ. ಆರ್. ಜಯಪ್ರಕಾಶ್ ಹೇಳಿದರು.

ವೀರಾಜಪೇಟೆ ವಕೀಲರ ಸಂಘದಿಂದ ಇಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲಿ ಆಟಗಾರರು ಸೋಲು ಗೆಲುವು ಎರಡನ್ನು ಅನುಭವಿಸಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಕೀಲರುಗಳು ಸದಾ ಕಕ್ಷಿದಾರರ ವಿಚಾರದಲ್ಲೇ ಇರುವಂತವರು, ಇಂತಹ ಕ್ರೀಡಾ ಕೂಟದಿಂದ ಪ್ರೀತಿ-ವಿಶ್ವಾಸದೊಂದಿಗೆ ಸಾಮರಸ್ಯದ ಬಾಂಧವ್ಯ ಮೂಡಲಿದೆ ಎಂದು ಆಶಿಸಿದರು.

ನ್ಯಾಯಾಧೀಶೆ ಶರ್ಮಿಳಾ ಕಾಮತ್, ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಅವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ವಕೀಲರುಗಳಾದ ಸಿ. ಎಚ್. ಕರುಣಾಕರನ್, ಎಂ.ಕೆ.ಪೂವಯ್ಯ, ಐ. ಆರ್. ಪ್ರಮೋದ್. ಕ್ರೀಡಾ ಕಾರ್ಯದರ್ಶಿ ಪಿ.ಎ.ಪವಾಜ್, ಹಾಗೂ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಕ್ರೀಡಾ ಕೂಟದಲ್ಲಿ ಕ್ರಿಕೆಟ್, ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ, 100 ಮೀಟರ್ ಓಟ ಹಾಗೂ ಇತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ವಕೀಲೆ ತಾರಾ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ವಿ.ಜಿ.ರಾಕೇಶ್ ನಿರೂಪಿಸಿ, ಕಾರ್ಯದರ್ಶಿ ಬಿ.ಎನ್.ಸುಬ್ಬಯ್ಯ ವಂದಿಸಿದರು. ಸ್ಪರ್ಧೆಯಲ್ಲಿ ಹಿರಿಯ ಕಿರಿಯ ವಕೀಲರುಗಳು ಭಾಗವಹಿಸಿದ್ದರು.