ಗೋಣಿಕೊಪ್ಪಲು, ಏ. 2: ಯುಗಾದಿ ಹಾಗೂ ಆರೆಸ್ಸೆಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಗಡೇವಾರ್ ಅವರ ಜನ್ಮ ದಿನದ ಅಂಗವಾಗಿ ಇಂದು ಜಿಲ್ಲೆಯ ಮೂರು ಕಡೆಗಳಲ್ಲಿ ಸಾವಿರಾರು ಗಣವೇಷಧಾರಿ ಸ್ವಯಂ ಸೇವಕರಿಂದ ಘೋಷ್ ಸಹಿತ ಪಥ ಸಂಚಲನ ನಡೆಯಿತು. ಮಡಿಕೇರಿ, ಕುಶಾಲನಗ, ಗೋಣಿಕೊಪ್ಪಲುವಿನಲ್ಲಿ ಪಥ ಸಂಚಲನ ಆಯೋಜಿಸಲಾಗಿತ್ತು.ಕರ್ನಾಟಕ ದಕ್ಷಿಣ ಪ್ರಾಂತದ ಸಹ ಪ್ರಾಂತ ಪ್ರಚಾರಕ ಗುರು ಪ್ರಸಾದ್ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ, ಅಸ್ಪøಶ್ಯತೆ ಹಾಗೂ ಮತಾಂತರವನ್ನು ತಡೆಯುವ ಮೂಲಕ ಗ್ರಾಮದ ಪರಿವರ್ತನೆಯೊಂದಿಗೆ ಬಲಿಷ್ಠ ಸಮಾಜವನ್ನು ನಿರ್ಮಾಣ ಮಾಡುವದು ಪ್ರತೀ ಸ್ವಯಂ ಸೇವಕರ ಆದ್ಯ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು.

ಪಥ ಸಂಚಲನ ಬಳಿಕದ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸಂಘದ ಶಾಖೆಗಳ ಮೂಲಕ ಪ್ರತೀ ಗ್ರಾಮದಲ್ಲಿ ಹಿಂದೂಗಳನ್ನು ಸಂಘಟಿಸುವ ಕೆಲಸವಾಗಬೇಕು. ಜಾತಿ ಆಧಾರದಲ್ಲಿ ಹಿಂದೂ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದ್ದು, ಅದಕ್ಕೆ ಸಂಘಟಿತ ಸಮಾಜ ಅಸ್ಪದ ನೀಡಬಾರದು. ಕೊಡಗಿನಲ್ಲಿ ಜಾತಿ ಆಧಾರದಲ್ಲಿ ರಾಜಕೀಯ ನಡೆಯದಂತೆ ಸ್ವಯಂ ಸೇವಕರು ಬಲಿಷ್ಠವಾದ ಸಮಾಜವನ್ನು ಕಟ್ಟಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಡಾ. ಕಟ್ಟೆರ ವಿನ್ಸಿ ಪೂಣಚ್ಚ ವಹಿಸಿದ್ದರು. ಸಂಘದ ಕೊಡಗು ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ ಮತ್ತು ವೀರಾಜಪೇಟೆ ತಾಲೂಕು ಸಂಘಚಾಲಕ ಕುಟ್ಟಂಡ ಪ್ರಿನ್ಸ್ ಗಣಪತಿ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಜಿಎಂಪಿ ಶಾಲಾವರಣದವರೆಗೆ ನೂರಾರು ಅಧಿಕ

(ಮೊದಲ ಪುಟದಿಂದ) ಗಣವೇಷಧಾರಿ ಸ್ವಯಂ ಸೇವಕರ ಪಥ ಸಂಚಲನ ನಡೆಯಿತು.

ಮಡಿಕೇರಿ: ಯುಗಾದಿ ಪ್ರಯುಕ್ತ ಮಡಿಕೇರಿ ನಗರದಲ್ಲಿಯೂ ಐನೂರಕ್ಕೂ ಅಧಿಕ ಗಣ ವೇಷಧಾರಿ ಸ್ವಯಂ ಸೇವಕರ ಪಥ ಸಂಚಲನ ನಡೆಯಿತು.

ನಗರದ ಗಾಂಧಿ ಮೈದಾನದಿಂದ ಹೊರಟ ಪಥ ಸಂಚಲನ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಖಾಸಗಿ ಬಸ್ ನಿಲ್ದಾಣ, ಗಣಪತಿ ಬೀದಿಗಾಗಿ, ಮಹದೇವಪೇಟೆ, ಚೌಕಿ, ಎಸ್‍ಬಿಐ ಮೂಲಕ ಗೌಳಿಬೀದಿಗಾಗಿ ಮತ್ತೆ ಗಾಂಧಿ ಮೈದಾನದಲ್ಲಿ ಸಮಾಪನ ಗೊಂಡಿತು. ಬಳಿಕ ನಡೆದ ಸಮಾರಂಭ ದಲ್ಲಿ ಮಂಗಳೂರು ವಿಭಾಗದ ಬೌದ್ಧಿಕ್ ಪ್ರಮುಖ್ ರಾಜೇಶ್ ದೇವರಕಾನ ಬೌದ್ಧಿಕ್ ಮಾಡಿದರು.

ಈ ಸಂದರ್ಭ ಜಿಲ್ಲಾ ಸಂಘ ಚಾಲಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಥ ಸಂಚಲನದಲ್ಲಿ ಜಿಲ್ಲಾ ಕಾರ್ಯವಾಹ ದಿನೇಶ್ ಕುಮಾರ್, ಜಿಲ್ಲಾ ಸಂಪರ್ಕ ಪ್ರಮುಖ್ ಅರುಣ್ ಕುಮಾರ್, ನಗರ ಕಾರ್ಯವಾಹ ಎಂ.ಎಸ್. ಜಯಚಂದ್ರ, ನಗರ ಸಂಪರ್ಕ ಪ್ರಮುಖ್ ಪವನ್, ಶಾಸಕರಾದ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪ್ರಮುಖರಾದ ಶಾಂತೆಯಂಡ ರವಿಕುಶಾಲಪ್ಪ, ಎಸ್.ಜಿ. ಮೇದಪ್ಪ, ಧನಂಜಯ್ ಹಾಗೂ ಇನ್ನಿತರರು ಇದ್ದರು. ರವಿ ಭೂತನ ಕಾಡು ವೈಯಕ್ತಿಕ ಗೀತೆ ಹಾಡಿದರು.

ಕುಶಾಲನಗರ: ಕುಶಾಲನಗರದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರು ಪಥಸಂಚಲನ ನಡೆಸಿದರು. ಕುಶಾಲನಗರದ ಗುಂಡೂರಾವ್ ಬಡಾವಣೆಯಿಂದ ಹೊರಟ ಸ್ವಯಂ ಸೇವಕರು ಮುಖ್ಯರಸ್ತೆಗಳಲ್ಲಿ ತೆರಳಿ ಪಟ್ಟಣದ ಬಡಾವಣೆಗಳಲ್ಲಿ ಸಂಚರಿಸಿತು. ಪಥಸಂಚಲನದಲ್ಲಿ ಗಣವೇಷಧಾರಿಗಳಾಗಿ ಶಾಸಕ ಅಪ್ಪಚ್ಚುರಂಜನ್ ಸೇರಿದಂತೆ ನೂರಾರು ಸ್ವಯಂ ಸೇವಕರು ಭಾಗವಹಿಸಿದ್ದರು.