ಮಡಿಕೇರಿ, ಏ.3 : ದಿಡ್ಡಳ್ಳಿಯಲ್ಲಿ ತಾತ್ಕಾಲಿಕವಾಗಿ ನೆಲೆನಿಂತಿರುವ ನಿರಾಶ್ರಿತರಿಗೆ ಈ ಹಿಂದೆ ಇದ್ದ ಪ್ರದೇಶದಲ್ಲೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಸರ್ಕಾರದ ಗಮನ ಸೆಳೆÉಯುವದಕ್ಕಾಗಿ ತಾ. 7 ರಂದು ದಿಡ್ಡಳ್ಳಿಯಿಂದ ಬೆಂಗಳೂರುವರೆಗೆ ಕಾಲ್ನಡಿಗೆ ಜಾಥ ನಡೆಸುವದಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತಿಳಿಸಿದೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಬಿ.ಎಸ್. ನಿರ್ವಾಣಪ್ಪ, ಭೂಮಿಯ ಹಕ್ಕನ್ನು ಪಡೆಯಲು ಜೈಲಿಗೆ ಹೋಗಲು ಸಿದ್ಧವೆಂದು ತಿಳಿಸಿದರು. ನಾಲ್ಕನೇ ಹಂತದ ಹೋರಾಟವಾಗಿ ಕಾಲ್ನಡಿಗೆ ಜಾಥವನ್ನು ನಡೆಸಲಾಗುತ್ತಿದ್ದು, ಸರ್ಕಾರಕ್ಕೆ ದಿಡ್ಡಳ್ಳಿಯ ನೈಜಾಂಶವನ್ನು ವಿವರಿಸಲಾಗುವದೆಂದರು. ತಾ. 14 ರಂದು ನಡೆಯುವ ಡಾ| ಅಂಬೇಡ್ಕರ್ ಅವರ ಜನ್ಮ ದಿನವನ್ನು ಜನತೆಯ ಹಕ್ಕುಗಳ ದಿನವನ್ನಾಗಿ ಆಚರಿಸುವ ಮೂಲಕ ತಾ. 15 ರಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಬೆಂಗಳೂರಿನಲ್ಲಿ ನಡೆಸಲಾಗುವ ದೆಂದರು.

ಸರ್ಕಾರದಿಂದ ಭೂಮಿಯ ಹಕ್ಕನ್ನು ಪಡೆದೇ ಜಿಲ್ಲೆಗೆ ಮರಳುವದಾಗಿ ತಿಳಿಸಿದ ನಿರ್ವಾಣಪ್ಪ, ಯಾವದೇ ಕಠಿಣ ಕ್ರಮಗಳನ್ನು ಎದುರಿಸಲು ಕೂಡ ಸಮಿತಿ ಸಿದ್ಧವಿದೆ ಎಂದರು. ತಾ. 7 ರಂದು ಗುಜರಾತಿನ ಚಳವಳಿಗಾರ ಜಿಗ್ನೇಶ್ ಮೇವಾನಿ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಲಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ನೆÉೀತೃತ್ವ ವಹಿಸಲಿದ್ದಾರೆ ಎಂದರು.

ದಿಡ್ಡಳ್ಳಿಯಲ್ಲಿ ನಿವೇಶನ ನೀಡಲು ಸರ್ಕಾರ ಸಿದ್ಧವಿದ್ದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಡೆಯೊಡ್ಡುತ್ತಿದ್ದಾರೆ. ಅಲ್ಲದೆ, ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು. ಇನ್ನೊಂದು ತಿಂಗಳಲ್ಲಿ ಮಳೆÉ ಆರಂಭವಾಗುವ ಸಾಧ್ಯತೆ ಇದ್ದು, ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿರುವ 600 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಭೂಮಿಯ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳ ವರ್ತನೆಯನ್ನು ಖಂಡಿಸುವದಾಗಿ ತಿಳಿಸಿದ ನಿರ್ವಾಣಪ್ಪ, ದೌರ್ಜನ್ಯದ ಮೂಲಕ ಬಡವರನ್ನು ಎತ್ತಂಗಡಿ ಮಾಡುವ ಯತ್ನ ನಡೆಯುತ್ತಿದೆಯೆಂದು ಟೀಕಿಸಿದರು.

ಜಿಲ್ಲಾಡಳಿತ ಸರ್ಕಾರದ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಬಡವ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಪಾಲೇಮಾಡು ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲವೆಂದ ನಿರ್ವಾಣಪ್ಪ, ಈ ಜಾಗದ ವಿವಾದಕ್ಕೆ ಕಂದಾಯ ಇಲಾಖೆ ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿಯ ಪ್ರಮುಖ ಹಾಗೂ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, ದಿಡ್ಡಳ್ಳಿ ಜನರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳು ವಿಶೇಷ ಸಭೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕೆಂದರು. ಪಾಲೇಮಾಡಿನಲ್ಲಿ ಕಳೆದ 15 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಾ ಬಂದ ಬಡವರಿದ್ದಾರೆ. ಆದರೆ, ಕೇವಲ ಒಂದು ವರ್ಷದಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಭೂಮಿಯ ಹಕ್ಕನ್ನು ನೀಡಲಾಗಿದೆಯೆಂದು ಟೀಕಿಸಿದರು.

ಪಾಲೇಮಾಡಿನಲ್ಲಿ ಕೇವಲ 30 ಮುಸ್ಲಿಂ ಕುಟುಂಬಗಳಿವೆ ಎಂದು ಸಮರ್ಥಿಸಿಕೊಂಡ ಅಮಿನ್ ಮೊಹಿಸಿನ್, ಇಲ್ಲಿನ ನಿವಾಸಿಗಳಿಗೆ ಮಂಜೂರಾಗಿರುವ 2 ಏಕರೆ ಸ್ಮಶಾನದ ಭೂಮಿಯ ದಾಖಲೆಯನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿದರು.

ಗಿರಿಜನ ಮುಖಂಡರಾದ ಜೆ.ಕೆ. ಮುತ್ತಮ್ಮ ಮಾತನಾಡಿ, ಭೂಮಿಯ ಹಕ್ಕಿಗಾಗಿ ಮತ್ತೆ ಬೆತ್ತಲೆ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧವೆಂದು ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಬಹುಜನ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ, ಬಹುಜನ ಸಮಾಜ ಪಕ್ಷದ ಉಪಾಧ್ಯಕ್ಷ ಜಯಪ್ಪ ಹಾನಗಲ್ ಹಾಗೂ ಸಮಿತಿ ಪ್ರಮುಖರಾದ ಅಪ್ಪು ಉಪಸ್ಥಿತರಿದ್ದರು.