ಗೋಣಿಕೊಪ್ಪಲು, ಏ. 3 : ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಅರ್ಜಿ ಮೂಲಕ ಮನವಿ ಸಲ್ಲಿಸಿದ್ದರೂ ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಡೆಗಣನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆದಿವಾಸಿ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದ ನಿವೇಶನ ರಹಿತರು ನಿವೇಶನ ನೀಡುವಂತೆ ಒತ್ತಾಯಿಸಿದರು. ನಂತರ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಎದರು ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಸಿಪಿಐಎಂ ಕಾರ್ಯದರ್ಶಿ ಸುನಿಲ್ ಮಾತನಾಡಿ, ಸಾಕಷ್ಟು ಅರ್ಜಿಗಳನ್ನು ತಾಲೂಕು ಕಚೇರಿಗೆ ನೀಡಲಾಗಿದೆ. ಆದರೆ ಯಾವದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಆದಿವಾಸಿ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್ ಡಿ ರಮೇಶ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 150 ಕ್ಕೂ ಹೆಚ್ಚು ಆದಿವಾಸಿಗಳಿಂದ ನಿವೇಶನಕ್ಕಾಗಿ ಅರ್ಜಿ ಪಡೆದು ಸಲ್ಲಿಸಲಾಗಿದೆ. ಸಾಕಷ್ಟು ಸರ್ಕಾರಿ ಜಾಗವಿದೆ. ಗೋಮಾಳ ಕೂಡ ಕೆಲವು ಕಡೆ ಒತ್ತುವರಿಯಾಗಿದೆ. ಇದನ್ನು ಪತ್ತೆ ಹಚ್ಚಿ ನಿವೇಶನ ರಹಿತರಿಗೆ ಹಂಚಬೇಕು ಎಂದು ಒತ್ತಾಯಿಸಿದರು.

ಸಾಂಕೇತಿಕ ಪ್ರತಿಭಟನೆ ನಡೆಸುವ ಬಗ್ಗೆ ಮಾಹಿತಿ ಇದ್ದರೂ ಕೂಡ ಅಲ್ಲಿಯೇ ಇದ್ದ ಇಒ ಕಿರಣ್ ಪೆಡ್ನೇಕರ್ ಪ್ರತಿಭಟನಾ ಸ್ಥಳಕ್ಕೆ ಬರಲು ವಿಳಂಬ ಮಾಡಿದರು. ಇದರಿಂದಾಗಿ ಸಾಂಕೇತಿಕ ಪ್ರತಿಭಟನೆ ಕೆಲ ಕಾಲ ಹೆಚ್ಚು ಸಮಯ ನಡೆಯಿತು. ನಂತರ ಬಂದು ಮನವಿ ಸ್ವೀಕರಿಸಿ, ಮುಂದಿನ ದಿನಗಳಲ್ಲಿ ಅರ್ಜಿಗಳನ್ನು ಪರಿಗಣಿಸುವ ಭರವಸೆ ನೀಡಿದರು.