ಮಡಿಕೇರಿ, ಏ. 3: ಹೆಸರುವಾಸಿ ಪ್ರವಾಸಿತಾಣ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಗಳನ್ನು ಒದಗಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿಯ ಭೀಮಾವಾದ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಅರಣ್ಯ ಇಲಾಖೆಯ ನಡುವಿನ ಭಿನ್ನಾಭಿಪ್ರಾಯ ಗಳಿಂದ ಪ್ರವಾಸಿಗರಿಗೆ ತೊಂದರೆ ಯಾಗುತ್ತಿದೆ ಎಂದು ಆರೋಪಿಸಿದರು.

ನಿಸರ್ಗಧಾಮದ ಅಭಿವೃದ್ಧಿಗಾಗಿ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಅರಣ್ಯ ಇಲಾಖೆ ಉದ್ದೇಶಿತ ಯೋಜನೆಗೇ ಬಳಕೆ ಮಾಡಬೇಕು. ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಮತ್ತು ಪ್ರಾಣಿ ಪಕ್ಷಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ನಿಯಮ ಬಾಹಿರವಾಗಿ ಪ್ರವಾಸಿಗ ರಿಂದ ಸಂಗ್ರಹಿಸುತ್ತಿರುವ ಶುಲ್ಕ ವಸೂಲಾತಿಯ ಮೇಲೆ ನಿಗಾ ಇಡಬೇಕು, ಕಂದಾಯ ಇಲಾಖೆ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸ ಬೇಕೆಂದು ಸಂಘಟನೆ ಪ್ರಮುಖ ಹೆಚ್.ಎಂ. ರಘು ಆಗ್ರಹಿಸಿದರು. ದಲಿತ ಸಂಘರ್ಷ ಸಮಿತಿ ಭೀಮ ವಾದದ ಜಿಲ್ಲಾ ಸಂಚಾಲಕ ಕೆ.ಬಿ ರಾಜು ಮಾತನಾಡಿ, ರಾಜ್ಯ ಹೆದ್ದಾರಿಯ ಬದಿಗಳಲ್ಲಿ ಪ್ರವಾಸಿಗರು ವಾಹನಗಳನ್ನು ನಿಲ್ಲಿಸುತ್ತಿದ್ದು, ಈ ವಾಹನಗಳಿಂದಲೂ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವದರಿಂದ ಪಾದಚಾರಿಗಳಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ, ಅಪಘಾತಗಳ ಸಂಖ್ಯೆಯೂ ಹೆಚ್ಚಾಗು ತ್ತಿದೆ. ಎಂದು ಆತಂಕ ವ್ಯಕ್ತ ಪಡಿಸಿದರು. ಸಮಿತಿಯ ಪ್ರಮುಖರಾದ ಚಂದ್ರೇಗೌಡ ಮಾತನಾಡಿ, ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಟಿ. ಶ್ರೀನಿವಾಸ್ ಹಾಗೂ ಹೋಬಳಿ ಅಧ್ಯಕ್ಷ ಜಗದೀಶ್ ಉಪಸ್ಥಿತರಿದ್ದರು.