ಕುಶಾಲನಗರ, ಏ. 3: ಕಾವೇರಿ ನಿಸರ್ಗಧಾಮ ನಿರ್ವಹಣೆ ಕಾಮಗಾರಿ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದು ಇಲ್ಲಿನ ವ್ಯಾಪಾರಿಗಳು ವ್ಯಾಪಾರ ವಹಿವಾಟು ಇಲ್ಲದೆ ಕಂಗಾಲಾಗಿರುವ ದೃಶ್ಯ ಗೋಚರಿಸಿದೆ. ಕಳೆದ ತಿಂಗಳ 13 ರಿಂದ ನಿಸರ್ಗ ಧಾಮಕ್ಕೆ ಪ್ರವಾಸಿಗರನ್ನು ನಿರ್ಬಂಧಿಸ ಲಾಗಿದ್ದು ನಿಸರ್ಗಧಾಮದ ಹೊರಭಾಗದಲ್ಲಿರುವ 70 ಕ್ಕೂ ಅಧಿಕ ಅಂಗಡಿ ಮಳಿಗೆಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.

ಏಪ್ರಿಲ್ 1 ರಂದು ಪ್ರವಾಸಿಗರಿಗೆ ಪ್ರವೇಶಾವಕಾಶ ಕಲ್ಪಿಸುವದಾಗಿ ಹಿರಿಯ ಅಧಿಕಾರಿಗಳು ಆಶ್ವಾಸನೆ ನೀಡಿದ್ದರೂ ಸ್ಥಳೀಯ ಅಧಿಕಾರಿಗಳು ಪ್ರವಾಸಿಗರಿಗೆ ಅವಕಾಶ ಕಲ್ಪಿಸಿಲ್ಲ ಎಂದು ಸ್ಥಳೀಯ ವ್ಯಾಪಾರಿ ಲೋಕೇಶ್ ಎಂಬವರು ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 70 ಕ್ಕೂ ಅಧಿಕ ಅಂಗಡಿ ಮಳಿಗೆಗಳು ಕಳೆದ 1 ತಿಂಗಳಿನಿಂದ ನಷ್ಟಕ್ಕೆ ಒಳಗಾಗಿವೆ. 200 ಕ್ಕೂ ಅಧಿಕ ಕಾರ್ಮಿಕರು ಬೀದಿಪಾಲಾಗಿದ್ದಾರೆ.

ಕಾವೇರಿ ನಿಸರ್ಗಧಾಮದ ಪ್ರವೇಶದ್ವಾರದಲ್ಲಿ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇದರಿಂದ ವರ್ತಕರಿಗೆ ಮಳೆಗಾಲದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ ಎಂದು ವರ್ತಕ ನಾಸಿರ್ ದೂರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಮಳಿಗೆಗಳ ಕಟ್ಟಡದ ಮಾಲೀಕರ ನಡುವೆ ಉಂಟಾಗಿರುವ ಸಾಮರಸ್ಯದ ಕೊರತೆಯಿಂದ ಮಳಿಗೆ ದಾರರು ಸಮಸ್ಯೆಗೆ ಒಳಗಾಗು ವಂತಾಗಿದೆ ಎಂದು ಹೇಳಿದ್ದಾರೆ.