ಗೋಣಿಕೊಪ್ಪಲು, ಏ. 3: ಕಾಫಿ ಬೆಳೆಗಾರರು ವ್ಯಾಪಾರಿಗಳ ಕಪಿಮುಷ್ಠಿಯಿಂದ ಹೊರ ಬಂದು ಕಾಫಿ ಉತ್ಪಾದನೆ ಹಾಗೂ ಆರ್ಥಿಕ ವಾಗಿ ಮುಂದುವರಿಯಲು ಯೋಜನೆ ರೂಪಿಸಿಕೊಳ್ಳುವ ಪ್ರಯತ್ನ ನಡೆಯಬೇಕಿದೆ ಎಂದು ಕಾಫಿ ಮಂಡಳಿ ಸದಸ್ಯ ಮಾಳೇಟೀರ ಅಬಿಮನ್ಯುಕುಮಾರ್ ಅಭಿಪ್ರಾಯ ಪಟ್ಟರು.

ಇಲ್ಲಿನ ಕಾಫಿ ಮಂಡಳಿ ವಿಸ್ತರಣಾ ವಿಭಾಗದಿಂದ ಕಾಫಿ ಬೆಳೆಗಾರರಿಗೆ ಕುಂದ ಗ್ರಾಮದ ಕೈಮುಡ್ಕೆ ಬಾಣೆಯಲ್ಲಿ ನಡೆದ ತಾಂತ್ರಿಕ ವಿಚಾರ ಅಧಿವೇಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಣ್ಣು ಪರೀಕ್ಷೆ ಆಧಾರದಂತೆ ಸುಣ್ಣ ಬಳಸುವ ವಿಧಾನ, ರಾಸಾಯನಿಕ ಗೊಬ್ಬರ ನೀಡುವ ವಿಧಾನ, ರೋಗದ ನಿಯಂತ್ರಣ, ಟ್ರ್ಯಾಪ್ ಬಳಕೆ, ಮಿಶ್ರ ಬೆಳೆ ಮೂಲಕ ನಷ್ಟ ಉಂಟಾಗದಂತೆ ಹೆಚ್ಚು ಇಳುವರಿ ವಿಧಾನಗಳ ಬಗ್ಗೆ ವಿಸ್ತರಣಾ ವಿಭಾಗದ ಪ್ರಬಾರ ಹಿರಿಯ ಸಂಪರ್ಕಾಧಿಕಾರಿ ಸಣ್ಣುವಂಡ ರಮೇಶ್ ಈ ಸಂದರ್ಭ ಸಲಹೆ ಗಳನ್ನು ನೀಡಿದರು.

ಸ್ಥಳೀಯ ಕಾಫಿ ಬೆಳೆಗಾರ ತೀತಮಾಡ ಎಂ ಕುಶಾಲಪ್ಪ ಉದ್ಘಾಟಿಸಿದರು. ಈಚೂರು, ಕುಂದ, ಗ್ರಾಮದ ಬೆಳೆಗಾರರು ಪಾಲ್ಗೊಂಡಿ ದ್ದರು. ಈ ಸಂದರ್ಭ ಕಾಫಿ ಮಂಡಳಿ ಜಂಟಿ ನಿರ್ದೇಶಕ ಹೇಮಂತ್ ಕುಮಾರ್, ಕಾಫಿ ಮಂಡಳಿ ಸದಸ್ಯರುಗಳಾದ ಬೊಟ್ಟಂಗಡ ರಾಜು, ಮಚ್ಚಮಾಡ ಡಾಲಿ ಚೆಂಗಪ್ಪ, ಪಟ್ಟಡ ರೀನಾ ಪ್ರಕಾಶ್, ಜಿ ಎಲ್ ನಾಗರಾಜು, ಉಪ ನಿರ್ದೇಶಕ ಸತೀಶ್ ಚಂದ್ರ ಉಪಸ್ಥಿತರಿದ್ದರು.