ಮಡಿಕೇರಿ, ಏ. 2: ದೇಶದ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಂತೆ ಮದ್ಯ ಮಾರಾಟ ಮಾಡದಿರುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದಲ್ಲಿ ಮದ್ಯದಂಗಡಿಗಳ ಸಹಿತ, ಬಾರ್‍ಗಳಿಗೂ ಕಾನೂನು ಪಾಲನೆಗೆ ನಿರ್ದೇಶಿಸಲಾಗಿದೆ.

ಈ ಹಿಂದೆ 500 ಮೀಟರ್ ತನಕ ಹೆದ್ದಾರಿಯಿಂದ ಮದ್ಯ ಮಾರಾಟ ಮಾಡದಂತೆ ನಿರ್ದೇಶಿಸಿದ್ದ ನ್ಯಾಯಾಲಯವು, ಈ ಅಂತರವನ್ನು ಮತ್ತೆ ಪರಿಷ್ಕರಿಸಿ 220 ಮೀಟರ್‍ಗೆ ನಿಗದಿಗೊಳಿಸಿದೆ.

ಆದರೆ, ಈ ವಿನಾಯಿತಿಯು ಕೇವಲ 20 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಪ್ರದೇಶಕ್ಕೆ ಅನ್ವಯವಾಗಲಿದೆ. ಆ ಪ್ರಕಾರ ಸಣ್ಣ ಪುಟ್ಟ ಪಟ್ಟಣಗಳ ಮೂಲಕ ಹಾದು ಹೋಗಲಿರುವ ಹೆದ್ದಾರಿಯಿಂದ 220 ಮೀ. ಅಂತರದಿಂದ ಹೊರಗೆ ಮದ್ಯ ಮಾರಾಟ ಮಾಡಲು ಅವಕಾಶವಿದೆ.

ಉಳಿದಂತೆ 20 ಸಾವಿರ ಮೇಲ್ಪಟ್ಟು ಜನವಸತಿ ಇರುವ ಕಡೆಗಳಲ್ಲಿ ಕಡ್ಡಾಯವಾಗಿ 500 ಮೀ. ದೂರದಾಚೆಯಲ್ಲಿ ಮತ್ರ ಮದ್ಯ ವಹಿವಾಟು ನಡೆಸಲು ಅನುಮತಿ ಲಭಿಸಲಿದೆ.

ಈ ಯಾವ ಕುರಿತಾಗಿಯೂ ರಾಜ್ಯ ಸರಕಾರದಿಂದ ಸೂಕ್ತ ನಿರ್ದೇಶನ ಲಭಿಸದ ಹಿನ್ನೆಲೆಯಲ್ಲಿ ಜಿಲ್ಲೆಯ ಮಟ್ಟಿಗೆ ಮದ್ಯ ವಹಿವಾಟು ಕುರಿತು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪರಿಶೀಲಿಸುತ್ತಿರುವದಾಗಿ ಜಿಲ್ಲಾ ಅಬಕಾರಿ ಕಚೇರಿ ಮೂಲಗಳು ಸುಳಿವು ನೀಡಿವೆ. ಹೇಗೂ ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಗಡುವು ಜೂನ್ ಹೊತ್ತಿಗೆ ಜಾರಿಗೆ ಬರಲಿದೆ. ಅಷ್ಟರೊಳಗೆ ರಾಜ್ಯ ಸರಕಾರದಿಂದ ಈಗಾಗಲೇ ಮದ್ಯ ವರ್ತಕರು ಪಡೆದಿರುವ ಸನ್ನದ್ದು ಶುಲ್ಕ ಅವಧಿ ಕೂಡ ಮುಕ್ತಾಯಗೊಳ್ಳಲಿದೆ. ಪ್ರಸಕ್ತ ಹೆದ್ದಾರಿ ಬದಿಯಲ್ಲಿರುವ ಮಳಿಗೆಗಳನ್ನು ಅಷ್ಟರಲ್ಲಿ ಸ್ಥಳಾಂತರಗೊಳಿಸುವ ಪ್ರಕ್ರಿಯೆ ಮುಗಿಯಬೇಕಿದೆ.