ಕುಶಾಲನಗರ, ಏ. 2: ಮಾಧ್ಯಮಗಳ ನಿಯಂತ್ರಣ ವಿಚಾರದ ಬಗ್ಗೆ ವಿಧಾನ ಪರಿಷತ್‍ನಲ್ಲಿ ಯಾವದೇ ರೀತಿಯ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ. ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿಧಾನ ಸಭೆಯಲ್ಲಿ ಜಂಟಿ ಸಮಿತಿ ರಚನೆಗೆ ಒಪ್ಪಿಗೆ ಬಂದ ಹಿನ್ನಲೆಯಲ್ಲಿ ಪರಿಷತ್‍ನಿಂದ 3 ಜನರನ್ನು ನೇಮಕ ಮಾಡಬೇಕಾಗಿದೆ. ಆದರೆ ಬಿಜೆಪಿ ಸದಸ್ಯರು ಈ ಸಮಿತಿಯಲ್ಲಿ ಇರಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.

ವಿಧಾನಪರಿಷತ್‍ನಲ್ಲಿ ಇಂದಿನವರೆಗೆ ಸದಸ್ಯರ ಹಾಜರಾತಿಯ ಕೊರತೆ ಕಾಡಲಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಂಕರಮೂರ್ತಿ ಅವರು, ಪರಿಷತ್‍ನಲ್ಲಿ ಅರ್ಥಪೂರ್ಣವಾಗಿ ಚರ್ಚೆಗಳು ನಡೆಯುತ್ತಿದೆ ಎಂದಿದ್ದಾರೆ. ಸದಸ್ಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಷತ್ ಕಲಾಪದ ಸಮಯಾವಕಾಶ ಹೆಚ್ಚಿಸುವ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಸರ್ಕಾರದಿಂದ ಜಾರಿಕೆ ಮತ್ತು ಹಾರಿಕೆಯ ಉತ್ತರಗಳೇ ಹೆಚ್ಚು ಬರುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಭಾಪತಿಗಳು, ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸವನ್ನೂ ಮಾಡಲಾಗಿದೆ. ಸದಸ್ಯರು ಕೇಳುವ ಪ್ರಶ್ನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸೂಕ್ತ ಸಲಹೆಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ರಾಜ್ಯಪಾಲ ಹುದ್ದೆಯ ಬಗ್ಗೆ ಮಾತನಾಡಿದ ಸಭಾಪತಿಗಳು, ಪ್ರಧಾನಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷರು ರಾಜ್ಯಪಾಲರ ಹುದ್ದೆಗೆ ತಮ್ಮ ಹೆಸರು ಪ್ರಸ್ತಾಪಿಸಿರುವ ಬಗ್ಗೆ ಮಾಹಿತಿ ಬಂದಿದೆ. 7 ವರ್ಷಗಳ ಕಾಲ ಸಭಾಪತಿಯಾಗಿ ಕೆಲಸ ಮಾಡಿರುವ ತನಗೆ ಯಾವದೇ ಜವಾಬ್ದಾರಿ ವಹಿಸಿದರೂ ನಿಭಾಯಿಸಲು ಸಿದ್ದವಿರುವದಾಗಿ ಹೇಳಿದರು.