ಮಡಿಕೇರಿ, ಏ. 2: ಪೊಲೀಸ್ ಸೇರಿದಂತೆ ಯಾವದೇ ವೃತ್ತಿ ಮಾಡುತ್ತಿದ್ದರೂ ದೇಶದ ರಕ್ಷಣೆಗೆ ಪ್ರಥಮ ಆದ್ಯತೆಯೊಂದಿಗೆ, ಭಾರತೀಯನಾಗಿ ಕೆಲಸ ನಿರ್ವಹಿಸಬೇಕೆಂದು ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ಕಾರ್ಯಪ್ಪ ಕರೆ ನೀಡಿದರು. ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ, ತಮ್ಮ ತಂದೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮರಣಾರ್ಥ ಪಾರಿತೋಷಕ ವಿತರಿಸಿ ಅವರು ಮಾತನಾಡುತ್ತಿದ್ದರು.ಕೊಡಗು ಪೊಲೀಸ್ ವ್ಯವಸ್ಥೆ ಶಿಸ್ತುಬದ್ಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ನಿಷ್ಠೆಯಿಂದ ನಿರಂತರ ಕರ್ತವ್ಯದಲ್ಲಿ ತೊಡಗುವಂತೆ ಕಿವಿಮಾತು ಹೇಳಿದರು.

ಸರ್ಕಾರದ ನೆರವಿಗೆ ಸಲಹೆ ಪೊಲೀಸ್ ಧ್ವಜ ದಿನಾಚರಣೆಗೆ ಚಾಲನೆ ನೀಡಿದ ನಿವೃತ್ತ ಪೊಲೀಸ್ ಉಪ ಅಧೀಕ್ಷಕ ವೈ.ಡಿ. ಕೇಶವಾನಂದ ಅವರು, ಪೊಲೀಸ್ ಧ್ವಜಾ ದಿನಾಚರಣೆ ಮೂಲಕ ಸಂಗ್ರಹಿಸುವ ಹಣವನ್ನು ನಿವೃತ್ತ ಪೊಲೀಸರ ಕಲ್ಯಾಣಕ್ಕಾಗಿ ಬಳಸುತ್ತಿದ್ದರೂ, ಆರೋಗ್ಯ ವೆಚ್ಚದ ಸಲುವಾಗಿ ಸರಕಾರದಿಂದ ಹೆಚ್ಚಿನ ನೆರವು ಒದಗಿಸಬೇಕೆಂದು ಸಲಹೆ ಮಾಡಿದರು.

ಈ ದಿಸೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ ಹಾಗೂ ಇಲಾಖೆಯ ಅಧಿಕಾರಿಗಳು ಸರಕಾರ ದೊಂದಿಗೆ ವ್ಯವಹರಿಸಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು, ಪ್ರಾಸ್ತಾವಿಕ ನುಡಿಯೊಂದಿಗೆ 1965ರಲ್ಲಿ ಪೊಲೀಸ್ ಧ್ವಜ ದಿನವನ್ನು ಆಚರಣೆಗೆ ತರಲಾಯಿತೆಂದು ನೆನಪಿಸಿದರು. ಹಗಲು - ಇರುಳೆನ್ನದೆ ದುಡಿಯುವ ಪೊಲೀಸರ ಕಲ್ಯಾಣಕ್ಕಾಗಿ ಪ್ರತಿವರ್ಷ ಏ. 2ರಂದು ಧ್ವಜ ಮಾರಾಟದಿಂದ ಕ್ಷೇಮನಿಧಿ ಸಂಗ್ರಹಿಸಿ, ಪೊಲೀಸರ ಶಸ್ತ್ರಚಿಕಿತ್ಸೆ ಸಂದರ್ಭ ಹಾಗೂ ಮರಣಪಟ್ಟ ಸಮಯದಲ್ಲಿ ನೆರವಿನ ರೂಪದಲ್ಲಿ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಂ.ಎ. ಅಪ್ಪಯ್ಯ, ಪೂಣಚ್ಚ, ಅರಣ್ಯಾಧಿಕಾರಿ ಸೂರ್ಯಸೇನ್, ಕರ್ನಲ್‍ಗಳಾದ ಉತ್ತಯ್ಯ, ಸುಬ್ಬಯ್ಯ, ಕೆಪಿಸಿಸಿ ಮುಖಂಡ ಮಿಟ್ಟು ಚಂಗಪ್ಪ, ಮೀನಾ ಕಾರ್ಯಪ್ಪ ಸೇರಿದಂತೆ ಇಲಾಖೆಯ ಪ್ರಮುಖರು, ನಿವೃತ್ತ ಪೊಲೀಸ್ ಬಳಗದವರು ಪಾಲ್ಗೊಂಡಿದ್ದರು.

ಈ ವೇಳೆ ನಿವೃತ್ತ ಪೊಲೀಸ್ ಸಿಬ್ಬಂದಿಗಳನ್ನು ಅತಿಥಿಗಳು ಗೌರವಿಸಿದರು. ಪೊಲೀಸ್ ಧ್ವಜ ದಿನಾಚರಣೆ ಸಲುವಾಗಿ ಆಕರ್ಷಕ ಪಥ ಸಂಚಲನ ನಡೆಸಲಾಯಿತು.