ನಾಪೆÇೀಕ್ಲು, ಏ. 3: ಶಿವಪೂಜೆಯಿಂದ ಪಿತೃ ಶಾಪ, ದುರ್ಗಾ ನಮಸ್ಕಾರ ಪೂಜೆಯಿಂದ ಮಾತೃ ಶಾಪ ಪರಿಹಾರವಾಗುವದಿಲ್ಲ. ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟು ಅವರನ್ನು ಧನ್ಯತೆಯಿಂದ ಬೇಡುವದರಿಂದ, ಸ್ಮರಿಸುವದರಿಂದ, ಅವರಿಗೆ ಸಂಪೂರ್ಣವಾಗಿ ಶರಣಾಗುವದರಿಂದ ಮಾತ್ರ ಪಿತೃ, ಮಾತೃ ಶಾಪ ವಿಮೋಚನೆ ಸಾಧ್ಯ. ನಂತರ ದೇವರ ಪೂಜೆ ಮಾಡಬಹುದು ಎಂದು ಮಂಗಳೂರು ಮರಕಡ ಶ್ರೀ ಗುರು ಪರಾಶಕ್ತಿ ಮಠದ ಶ್ರೀ. ಶ್ರೀ. ಶ್ರೀ. ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿ ಭಕ್ತರಿಗೆ ಕಿವಿಮಾತು ಹೇಳಿದರು.

ಇಲ್ಲಿಗೆ ಸಮೀಪದ ಕಿರುಂದಾಡು ಶ್ರೀ ಭಗವತಿ ಅನ್ನಪೂರ್ಣೇಶ್ವರಿ ದೇವಳದಲ್ಲಿ ನಡೆದ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಇತ್ತೀಚಿನ ದಿನಗಳಲ್ಲಿ ಪಿತೃ ಶಾಪ, ಮಾತೃ ಶಾಪ ಹೆಚ್ಚಾಗಿ ಮಕ್ಕಳನ್ನು ಬಾಧಿಸುತ್ತಿದೆ. ಒಬ್ಬ ತಂದೆಯನ್ನು ಮಗ ಚೆನ್ನಾಗಿ ನಡೆಸಿಕೊಳ್ಳುತ್ತಿಲ್ಲ ಎಂದಾದರೆ, ತಂದೆ ತನ್ನ ತಂದೆಯನ್ನು ಎಷ್ಟರ ಮಟ್ಟಿಗೆ ಸಲಹಿದನೆಂಬುದನ್ನು ಅರ್ಥೈಸಿಕೊಳ್ಳಬೇಕು. ಇದು ತಂದೆಯಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ದೊರೆತ ಬಳುವಳಿಯಾಗಿದೆ. ಆದುದರಿಂದ ಮಾತಾಪಿತೃಗಳಿಂದ ಶಾಪ ಪಡೆಯುವ ಬದಲು ಅವರನ್ನು ಆದರದಿಂದ, ಪ್ರೀತಿ ವಾತ್ಸಲ್ಯದಿಂದ ಸಲಹುವದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಹೇಳಿದರು.

ದೇವಳದ, ದೇವಿಯ, ಗ್ರಾಮಸ್ಥರ ಬಗ್ಗೆ ಮಾತನಾಡಿದ ಅವರು ಕೇವಲ 11 ತಿಂಗಳ ಅವಧಿಯಲ್ಲಿ ಒಂದು ಕೋಟಿಗಿಂತಲೂ ಹೆಚ್ಚಿನ ಖರ್ಚಿನಲ್ಲಿ ಸುಂದರ ಗರ್ಭಗುಡಿ, ನಮಸ್ಕಾರ ಮಂಟಪ ನಿರ್ಮಾಣಗೊಂಡು ದೇವಿಯ ಬ್ರಹ್ಮಕಲಶವು ನಡೆದಿದೆ. ಇದನ್ನು ಗ್ರಾಮಸ್ಥರು ಮಾಡಿದ್ದಲ್ಲ. ನೀವು ನೆಪ ಮಾತ್ರ. ಅವಳ ದೇವಳವನ್ನು ಅವಳೇ ನಿಮ್ಮಿಂದ ಕಟ್ಟಿಸಿ ಕೊಂಡಿದ್ದಾಳೆ. ನೀವು ಕಾರಣಭೂತರು ಅಷ್ಟೇ ಎಂದು ನೆನಪಿಸಿದರು.

ಇಲ್ಲಿ ಜೀವಜಾಲಗಳು ಅನನ್ಯವಿದ್ದು, ದೇವರೆಂದರೆ ನೀವು ಪಡೆದುಕೊಂಡಂತೆ ಇದು ಭಗವತಿ ಎಂಬ ಭಾವ. ಚಿಂತನೆಯಲ್ಲ. ಸೃಷ್ಠಿ ಲಯಗಳಿಗೆ ಮೂಲ ಕಾರಣ ಇವಳು. ತ್ರಿಮೂರ್ತಿಗಳಿಗಿಂತಲೂ ಮಿಗಿಲಾದ ದೇವ ಸಂಕಲ್ಪ ಇದೆ.

(ಮೊದಲ ಪುಟದಿಂದ) ಮೂಲ ಚೈತನ್ಯ ಮಾತ್ರ ಅಸಮಾನ್ಯವಾದದು. ಇದೇ ಪೂರ್ಣ, ಇದೇ ಅನನ್ಯ ದೈವತ್ವ ಸಾಮೀಪ್ಯ. ಅನುಭವಿಸುವ ದೇವ ಭಾವಗಳನ್ನು ಅನುಕರಿಸುವದು ನಿಜ ಜೀವಿತದ ಸಾರ್ಥಕತೆ. ದೈವತ್ವದ ಮಾನದಂಡ ಬೇಡಿದನ್ನು ನೀಡುವದು. ಅದೇ ದೇವರು ಎಂದು ತಿಳಿಸಿದರು.

ಕರ್ಮ ಬಂಧಗಳ ಸರಪಣಿಯಿಂದ ಮುಳುಗೇಳುವ ನಾವು ದೇವರಿಗೆ ಲಂಚ ನೀಡುತ್ತೇವೆ. ಲಂಚ ಪಡೆಯುವ ದೇವರು ನಮಗೆ ಬೇಡ. ನಾವು ನೋವು ಅನುಭವಿಸುವದು ನಾವು ಮಾಡಿದ ದುರಿತಗಳ ಫಲ. ನಾವು ಮಾಡಿದ ದುರಿತಕ್ಕೆ ದೇವರು ಸಾಕ್ಷಿ ಭೂತನಾಗುವದಿಲ್ಲ. ನಾವು ಮಾಡಿದ ಫಲ ನಾವೇ ಉಣ್ಣಬೇಕು. ನಮ್ಮ ನೋವಿಗೆ ನಾವೇ ಕಾರಣ ಭೂತರು. ಮನುಷ್ಯ ಅಹಂಕಾರದ ಮೊಟ್ಟೆಯಿದ್ದಂತೆ. ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವದಿಲ್ಲ. ತಮ್ಮ ತಪ್ಪಿನ ಆತ್ಮಾವಲೋಕನ ಮಾಡಿಕೊಂಡು, ಧನ್ಯತಾಭಾವದ ಪ್ರಾರ್ಥನೆಯೊಂದಿಗೆ, ಆಡುವ ಮಾತುಗಳು ನಿನ್ನದು. ನಡೆಯುವ ಹೆಜ್ಜೆಯೂ ನಿನ್ನದು ಎಂದು ದೇವರಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರೆ ನೆಮ್ಮದಿಯ, ಶಾಂತಿಯ ಜೀವನ ನಡೆಸಲು ಸಾಧ್ಯವೆಂದು ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು ಬಿಜೆಪಿ ಆಡಳಿತ ಅವಧಿಯಲ್ಲಿ ಮುಜರಾಯಿ ದೇವಳಗಳನ್ನು ಹೊರತುಪಡಿಸಿ ಜಿಲ್ಲೆಯ ಇತರ ದೇವಳಗಳ ಅಭಿವೃದ್ಧಿಗೆ 8.50 ಕೋಟಿ ರೂ. ನೀಡಲಾಗಿದೆ. ದೇವಳಗಳ ಅಭಿವೃದ್ಧಿಯಿಂದ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ನುಡಿದರು.

ದೇವಳ ಆಡಳಿತ ಮಂಡಳಿ ಸಲಹಾ ಸಮಿತಿ ಸದಸ್ಯ ಬಾದುಮಂಡ ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕೆ.ಎ.ಎಸ್. ಅಧಿಕಾರಿ ಪಾಂಡಿಚೆಟ್ಟಿರ ಗಣಪತಿ ವಹಿಸಿದ್ದರು. ಅಪ್ಪನೆರವಂಡ ಮಾಚಮ್ಮ ಪ್ರಾರ್ಥನೆ, ದೇವಳ ಆಡಳಿತ ಮಂಡಳಿ ಕಾರ್ಯದರ್ಶಿ ಕುಮ್ಮಂಡ ಪೆಮ್ಮಯ್ಯ ಸ್ವಾಗತಿಸಿ, ಪಳಂಗಂಡ ಕಮಲ ಸುಬ್ಬಯ್ಯ ವಂದಿಸಿದರು.

-ಪಿ.ವಿ.ಪ್ರಭಾಕರ್