ಹೆಬ್ಬಾಲೆ, ಏ. 2: ರಾಜ್ಯ ಸರ್ಕಾರ ತುಮಕೂರು ಸಿದ್ಧಾಗಂಗಾ ಶ್ರೀಗಳ 111ನೇ ಜನ್ಮದಿನಾಚರಣೆಯನ್ನು ಮುಂದಿನ ವರ್ಷ ಸರ್ಕಾರ ವತಿಯಿಂದ ಆಚರಿಸುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಬೇಕು ಎಂದು ಹಾಸನ ಜಿಲ್ಲಾ ಬಸವಾಪಟ್ಟಣ ಶ್ರೀ ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಹೇಳಿದರು.

ಸಮೀಪದ ತೊರೆನೂರು ವೀರಶೈವ ಸಮಾಜದ ವತಿಯಿಂದ ಶ್ರೀ ಶಿವಕುಮಾರ ಸ್ವಾಮಿಗಳ 110ನೇ ಜನ್ಮದಿನೋತ್ಸವದ ಅಂಗವಾಗಿ ತೊರೆನೂರು ಬಸವೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಗುರುವಂದನಾ ಮತ್ತು ಶರಣ ಸಂಸ್ಕøತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀಗಳು ವಿವಿಧ ಧರ್ಮದ ಲಕ್ಷಾಂತರ ಬಡ ಅನಾಥ ಮಕ್ಕಳಿಗೆ ಶಿಕ್ಷಣ ಭಾಗ್ಯ ಕರುಣಿಸುವ ಮೂಲಕ ಆರಾಧ್ಯದೇವರಾಗಿದ್ದಾರೆ.

ಕನ್ನಡ ನಾಡಿನ ಆಶಾಕಿರಣವಾಗಿ ದಿನದ 20 ಗಂಟೆಗಳ ಕಾಲ ಜನ ಕಲ್ಯಾಣಕ್ಕಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದಾರೆ.

ಶ್ರೀಗಳಂತಹ ದಾರ್ಶನಿಕ ಸ್ವಾಮೀಜಿ ಅವರ ಆದರ್ಶ ಚಿಂತನೆಗಳು ಹಾಗೂ ಸೇವಾ ಕೈಂಕಾರ್ಯಗಳಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದರು.

ತೊರೆನೂರು ವಿರಕ್ತಮಠದ ಶ್ರೀ ಮಲ್ಲೇಶಸ್ವಾಮಿ ಮಾತನಾಡಿ, ಪ್ರತಿಯೊಬ್ಬರು ಶರಣ ಸಂಸ್ಕøತಿಯನ್ನು ಬೆಳೆಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಹಾಸನದ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ತೊರೆನೂರು ಗ್ರಾ.ಪಂ. ಅಧ್ಯಕ್ಷ ಕೆ.ಬಿ. ದೇವರಾಜು, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಟಿ. ದಿನೇಶ್, ನಿರ್ದೇಶಕ ಎಸ್.ಎಸ್. ಚಂದ್ರಶೇಖರ್, ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಪಾಂಡುರಂಗ, ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ಶಾಂಭವಮೂರ್ತಿ, ಗ್ರಾ.ಪಂ. ಸದಸ್ಯ ಟಿ.ಡಿ. ಈಶ್ವರ್, ಸಮಾಜದ ಗೌರವಾಧ್ಯಕ್ಷ ಟಿ.ಎಸ್. ತುಂಗರಾಜ್, ಕಾರ್ಯದರ್ಶಿ ಟಿ.ವಿ. ಶಂಕರಮೂರ್ತಿ, ಗೌರವ ಕಾರ್ಯದರ್ಶಿ ಟಿ.ಎನ್. ಶಿವಾನಂದ, ಸಹಕಾರ್ಯದರ್ಶಿ ಟಿ.ಜಿ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಕಿ ಟಿ.ವಿ. ಶೈಲಾ ನಿರೂಪಿಸಿ, ತುಂಗರಾಜ್ ಸ್ವಾಗತಿಸಿ, ಮಂಜುನಾಥ್ ವಂದಿಸಿದರು. ಇದಕ್ಕೂ ಮೊದಲು ಊರಿನ ಬಸವೇಶ್ವರ ದೇವಸ್ಥಾನ ಬಳಿಯಿಂದ ಅಲಂಕೃತ ಎತ್ತಿನ ಗಾಡಿಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಭಾವಚಿತ್ರವನ್ನು ಶೃಂಗರಿಸಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಮಹಿಳೆಯರು ಪೂರ್ಣಕುಂಭ ಕಲಶ ಹೊತ್ತು ಸಾಗುವ ಮೂಲಕ ಮೆರುಗು ನೀಡಿದರು. ತೊರೆನೂರು ಗ್ರಾ.ಪಂ. ಅಧ್ಯಕ್ಷ ಕೆ.ಬಿ. ದೇವರಾಜು ಮೆವಣಿಗೆಗೆ ಚಾಲನೆ ನೀಡಿದರು.