ಸುಂಟಿಕೊಪ್ಪ, ಏ. 2: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ಕಳೆದ 5 ದಿನಗಳಿಂದ ಸಾರ್ವಜನಿಕರಿಂದ ನಡೆಸಲಾಗುತ್ತಿದ್ದ ಅಷ್ಟಮಂಗಲ ಪ್ರಶ್ನೆಗೆ ತಾತ್ಕಾಲಿಕವಾಗಿ ತೆರೆಬಿದಿದೆ.

1969 ರಲ್ಲಿ ದೇವಾಲಯದ ಮೂರ್ತಿಯನ್ನು ಪ್ರತಿಷ್ಠಾಪಿಸ ಲಾಗಿದ್ದು, ಆನಂತರ ದೇವಾಲಯದಲ್ಲಿ ಕಂಡುಬಂದ ಅಡ್ಡಿ-ಅತಂಕಗಳ ಬಗ್ಗೆ ಕಾಸರ ಗೋಡುವಿನ ಉಡುಪುಮೂಲೆಯ ತಂತ್ರಿಗಳಾದ ರಾಘವೇಂದ್ರ ಭಟ್, ಬಿ.ಸಿ. ರೋಡಿನ ಸದಾನಂದ ಭಟ್ ಹಾಗೂ ಹೊನ್ನಾವರದ ಶ್ರೀಪಾದಭಟ್ ಸವಿಸ್ತಾರವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ದೇವಾಲಯದ ಪುನರ್ ಜೀರ್ಣೋದ್ಧಾರ ಕಾರ್ಯವನ್ನು ಸುಂಟಿಕೊಪ್ಪದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯ ಭಕ್ತಾದಿಗಳ ಸಮಿತಿ ಸದಸ್ಯರುಗಳ ಹೊಂದಾಣಿಕೆ ಯಿಂದ ಕಾರ್ಯೋನ್ಮುಖರಾಗುವಂತೆ ಅಷ್ಟಮಂಗಲದಲ್ಲಿ ತಿಳಿಸಿದ್ದಾರೆ.

ಮೇ 29 ರಿಂದ ಮತ್ತೆ ಅಷ್ಟಮಂಗಲ ಪ್ರಶ್ನೆಯನ್ನು ಈ ದೇವಾಲಯದ ಆವರಣದಲ್ಲಿ ಇಟ್ಟು ಅಂತಿಮವಾಗಿ ದೇವಾಲಯವನ್ನು ಹೇಗೆ ಪುನರ್ ಪ್ರತಿಷ್ಠಾಪಿಸಬೇಕೆಂದು ತೀರ್ಮಾನಕ್ಕೆ ಬರಲಾಗುವದೆಂದು ತಿಳಿಸಿದ್ದಾರೆ.