ಸೋಮವಾರಪೇಟೆ, ಏ. 3: ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಯುಗಾದಿ ಹಾಗೂ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೇವಾರ್ ಜನ್ಮದಿನದ ಪ್ರಯುಕ್ತ ನಗರದಲ್ಲಿ ಸಾವಿರಾರು ಮಂದಿ ಗಣವೇಷಧಾರಿ ಸ್ವಯಂ ಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು.

ಪಟ್ಟಣದ ಜಿ.ಎಂ.ಪಿ. ಶಾಲಾ ಮೈದಾನದಿಂದ ಪ್ರಾರಂಭಗೊಂಡ ಪಥ ಸಂಚಲನದಲ್ಲಿ ಸಾವಿರಾರು ಗಣವೇಷಧಾರಿಗಳು ಶಿಸ್ತಿನಿಂದ ಹೆಜ್ಜೆ ಹಾಕಿದರು.

ಪಥಸಂಚಲನ ತೆರಳುವ ಮಾರ್ಗ ವನ್ನು ಮಹಿಳೆಯರು ರಂಗೋಲಿ ಗಳಿಂದ ಅಲಂಕಾರ ಮಾಡಿದ್ದರೆ, ಸಂಘದ ಹಿತೈಷಿಗಳು ಭಗವಾಧ್ವಜಕ್ಕೆ ಪುಷ್ಪಾರ್ಚನೆಗೈದರು. ಬಸ್ ನಿಲ್ದಾಣಕ್ಕೆ ಪಥ ಸಂಚಲನ ಆಗಮಿಸಿದ ಸಂದರ್ಭ ಪಟಾಕಿ ಸಿಡಿಸಿ ಸ್ವಾಗತಿಸಿದರು.

ಪಥಸಂಚಲನದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಕ್ಕೂ ಅಧಿಕ ಸ್ವಯಂಸೇವಕ ರೊಂದಿಗೆ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಮುಖರು ಭಾಗವಹಿಸಿದ್ದರು. ಪುಟಾಣಿ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಆರ್‍ಎಸ್‍ಎಸ್ ದಕ್ಷಿಣ ಪ್ರಾಂತ ಪ್ರಚಾರಕ್ ಸುಧೀರ್ ಅವರು ಮಾತನಾಡಿ, ಯೋಧರ ನಾಡಿನಲ್ಲಿ ಇಂದು ದೇಶಭಕ್ತರ ಸಂಚಲನ ನಡೆದಿದೆ. ಕಳೆದ 60ರ ದಶಕದಲ್ಲಿಯೇ ದೇಶದ ಪ್ರಪ್ರಥಮ ಮಹಾದಂಡನಾಯಕ ಫೀ. ಮಾ. ಕಾರ್ಯಪ್ಪ ಅವರೂ ಸಹ ಆರ್‍ಎಸ್‍ಎಸ್ ಕಾರ್ಯ ಚಟುವಟಿಕೆ, ಸಂಘದ ಶಿಸ್ತಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು ನೆನಪಿಸಿದರು.

2025ರ ವೇಳೆಗೆ ಭಾರತ ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವಾಗಬೇಕು ಎಂಬ ಕನಸನ್ನು ಮಾಜೀ ರಾಷ್ಟ್ರಪತಿ ಅಬ್ದುಲ್ ಕಲಾಂ ಕಂಡಿದ್ದರು. 2025ರ ವೇಳೆಗೆ ಸಂಘಕ್ಕೆ 100 ವರ್ಷಗಳು ತುಂಬಲಿದ್ದು, ಅಬ್ದುಲ್ ಕಲಾಂ ಅವರ ಕನಸ್ಸಿನಂತೆ ಭಾರತವನ್ನು ವಿಶ್ವಗುರು ಮಾಡಲು ಸಂಘದ ಸ್ವಯಂ ಸೇವಕರು ಶ್ರಮಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಚಂದ್ರಹಾಸ್ ಭಟ್ ಮಾತನಾಡಿ, ರಾಷ್ಟ್ರೀಯ ವಿಚಾರಧಾರೆಯ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ರಾಷ್ಟ್ರಭಕ್ತಿಯನ್ನು ಮೈಗೂಡಿಸಬೇಕು ಎಂದು ಆಶಿಸಿದರು. ವೇದಿಕೆಯಲ್ಲಿ ಸಂಘಚಾಲಕ್ ಚಕ್ಕೇರ ಮನು ಉಪಸ್ಥಿತರಿದ್ದರು.