ಮಡಿಕೇರಿ, ಏ. 3 : ಪಾಲೆಮಾಡಿನ ಸ್ಮಶಾನದ ಜಾಗ ಮತ್ತು ಕ್ರಿಕೆಟ್ ಸ್ಟೇಡಿಯಂ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ನೈಜಾಂಶದ ವರದಿಯನ್ನು ಸಲ್ಲಿಸದೆ ಉಳ್ಳವರ ಪರವಾದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಬಹುಜನ ಕಾರ್ಮಿಕರ ಸಂಘ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘÀದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ, ಸ್ಮಶಾನದ ಜಾಗಕ್ಕಾಗಿ ಒತ್ತಾಯಿಸಿ ಮತ್ತೆ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವದಾಗಿ ಎಚ್ಚರಿಕೆ ನೀಡಿದರು.ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ತಪ್ಪು ಮಾಹಿತಿಯನ್ನು ನೀಡಿದ್ದಾರೆಂದು ಆರೋಪಿಸಿದ ಅವರು, ಸ್ಮಶಾನದ ಜಾಗಕ್ಕೆ ಆರ್‍ಟಿಸಿ ಇದೆಯೆಂದು ಸಮರ್ಥಿಸಿಕೊಂಡರು.

ಜಾಗ ಮಂಜೂರಾಗಿದ್ದು, ಇದನ್ನು ದುರಸ್ತಿ ಮಾಡಬೇಕಷ್ಟೆ. ಆದರೆ, ಕ್ರಿಕೆಟ್ ಸ್ಟೇಡಿಯಂ ಪರವಿರುವ ಜಿಲ್ಲಾಧಿಕಾರಿಗಳು ಪೊಲೀಸರ ಮೂಲಕ ಬೆದರಿಕೆಯೊಡ್ಡಿ ಹೋರಾಟ ಗಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಾಲೇಮಾಡಿನಲ್ಲಿ 40 ಏಕರೆ ಪ್ರದೇಶದಲ್ಲಿ ದಲಿತರು ಹಾಗೂ ಮುಸಲ್ಮಾನರು ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ತಪ್ಪು ಮಾಹಿತಿ ನೀಡಿದೆ. ಸುಮಾರು 18 ಏಕರೆ ಪ್ರದೇಶದಲ್ಲಷ್ಟೆ ಬಡವರು ನೆಲೆ ನಿಂತಿದ್ದು, ಯಾವದೇ ಬೆದರಿಕೆಗಳಿಗೆ ಅಂಜುವ ಮಾತೇ ಇಲ್ಲವೆಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿಗಳ ವರ್ತನೆ ಬಡವರ ವಿರುದ್ಧವಾಗಿದ್ದು, 2005 ರಿಂದ ನಡೆಸಿಕೊಂಡು ಬಂದ ನಿವೇಶನದ ಹಕ್ಕಿನ ಹೋರಾಟಕ್ಕೆ ಯಾವದೇ ಸ್ಪಂದನ ದೊರಕಿಲ್ಲ. ಉಪವಾಸ ಸತ್ಯಾಗ್ರಹ ನಡೆಸುವದು ಅನಿವಾರ್ಯವಾಗಿದೆಯೆಂದು ಮೊಣ್ಣಪ್ಪ ತಿಳಿಸಿದರು. ಜಿಲ್ಲಾಧಿಕಾರಿ ಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಜಾಗವನ್ನು ಮತ್ತು ಜಾಗದ ದಾಖಲೆಯನ್ನು ಪರಿಶೀಲಿಸಿ ಚರ್ಚೆಯ ಮೂಲಕ ವಿವಾದವನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

ಹೊದ್ದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆÀ ಕುಸುಮಾವತಿ ಮಾತನಾಡಿ, ಜಿಲ್ಲಾಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಾಲೆಮಾಡಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 30 ರಿಂದ 35 ಕುಟುಂಬಗಳಷ್ಟೆ ನೆಲೆಸಿವೆ. ಬಡವರಿಗಾಗಿ 18 ಏಕರೆ ಜಾಗ ಹಾಗೂ 2 ಏಕರೆ ಸ್ಮಶಾನದ ಜಾಗವನ್ನು ಪಡೆದೇ ತೀರುವದಾಗಿ ಕುಸುಮಾವತಿ ಹೇಳಿದರು.

ಕಾರ್ಯದರ್ಶಿ ಕೆ. ಪೂವಯ್ಯ ಮಾತನಾಡಿ, ಸ್ಮಶಾನದ ಜಾಗಕ್ಕಾಗಿ ರಾಜ್ಯ ಮಟ್ಟದ ಹೋರಾಟ ನಡೆಸುವದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪಿ.ರಾಜು ಉಪಸ್ಥಿತರಿದ್ದರು.