ಹೆಬ್ಬಾಲೆ, ಏ. 4: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಕ ಬ್ಲಾಕ್ ಬಡಾವಣೆಯಲ್ಲಿ ಅರಳಿಕಟ್ಟೆ ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಇದೇ ಅರಳಿಕಟ್ಟೆಯನ್ನು ಪಂಚಾಯಿತಿ ವತಿಯಿಂದ ರೂ. 50 ಸಾವಿರ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಈ ವರ್ಷ ಮತ್ತೆ ಇದೇ ಅರಳಿಕಟ್ಟೆ ಅಭಿವೃದ್ಧಿ ಹೆಸರಿನಲ್ಲಿ ರೂ. 70 ಸಾವಿರ ಅನುದಾನದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಅರಳಿಕಟ್ಟೆ ಅಭಿವೃದ್ಧಿ ಕಾಮಗಾರಿಯಲ್ಲಿ ಹಳೆಯ ಕಲ್ಲುಗಳನ್ನೇ ಬಳಕೆ ಮಾಡಿಕೊಂಡು ಅರಳಿಕಟ್ಟೆಗೆ ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ಅಲ್ಲದೆ ಈ ಹಿಂದೆ ಹಾಕಲಾಗಿದ್ದ ಕÀಲ್ಲಿನ ಕಟ್ಟೆಗೆ ಸಿಮೆಂಟ್‍ನಿಂದ ಪ್ಲಾಸ್ಟರ್ ಮಾಡುವ ಮೂಲಕ ತೇಪೆ ಹಾಕುವ ಕಾಮಗಾರಿ ಮಾಡಿ ಗುತ್ತಿಗೆದಾರರು ಕೈ ತೊಳೆದುಕೊಂಡಿದ್ದಾರೆ ಎಂದು ದೂರಿದ್ದಾರೆ.

ಮಾರ್ಚ್ ಅಂತ್ಯದೊಳಗೆ ಎಲ್ಲಾ ಅನುದಾನವನ್ನು ಖಾಲಿ ಮಾಡುವ ಉದ್ದೇಶದಿಂದ ಮಾಡಿರುವ ಕಾಮಗಾರಿಗಳನ್ನೇ ಮತ್ತೊಮ್ಮೆ ಮಾಡುವ ಜೊತೆಗೆ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಬಿಲ್ಲು ಪಡೆಯುವದು ಗುತ್ತಿಗೆದಾರರ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಅರಳಿಕಟ್ಟೆ ಕಾಮಗಾರಿ ರೂ.70 ಸಾವಿರ ಅಧಿಕ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ದೂರಲಾಗಿದೆ.

ಅಲ್ಲದೇ ಗ್ರಾ.ಪಂ. ಸದಸ್ಯರೊಬ್ಬರು ಬೇನಾಮಿ ಹೆಸರಿನಲ್ಲಿ ಈ ಕಾಮಗಾರಿಯನ್ನು ನಡೆಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಳಪೆ ಗುಣಮಟ್ಟದ ಕಾಮಗಾರಿಯನ್ನು ಸಂಪೂರ್ಣ ತೆಗೆದು ಹೊಸದಾಗಿ ಅರಳಿಕಟ್ಟೆ ಅಭಿವೃದ್ಧಿಪಡಿಸಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.