ಮಡಿಕೇರಿ ಏ.4 : ಕೊಡಗು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಸರಕಾರದ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ ತಾವೇ ವ್ಯಾಪಾರಕ್ಕೆ ಇಳಿಯುವ ಮೂಲಕ ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಸಗಟು ಮಾರಾಟ ಸ್ಟೋರ್ (ಜನತಾ ಬಜಾರ್)ನ ಆಡಳಿತ ಮಂಡಳಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದÀ ಜನತಾ ಬಜಾರ್ ಅಧ್ಯಕ್ಷ ಎನ್.ಎ. ರವಿಬಸಪ್ಪ, ಕೊಡಗು ಜಿಲ್ಲಾ ಸಗಟು ಮಾರಾಟ ಸ್ಟೋರ್ (ಜನತಾ ಬಜಾರ್)ಕಳೆದ 50 ವರ್ಷಗಳಿಂದ ಸರಕಾರದ ಎಲ್ಲಾ ಕಚೇರಿ, ಕಾರಾಗೃಹ, ಆಸ್ಪತ್ರೆಗಳು ಹಾಗೂ ಹಾಸ್ಟೇಲ್‍ಗಳಿಗೆ ಗುಣಮಟ್ಟದ ಆಹಾರ ಸಾಮಗ್ರಿ ಮತ್ತು ದಿನಬಳಕೆ ವಸ್ತುಗಳನ್ನು ಸರಬರಾಜು ಮಾಡಿಕೊಂಡು ಬರುತ್ತಿದೆ ಎಂದರು. ನಿಯಮದ ಪ್ರಕಾರ ಎಂಎಸ್‍ಪಿಟಿಸಿ ಸಂಘದ ಸದಸ್ಯರು ಕ್ಲೀನಿಂಗ್ ಮತ್ತು ಪ್ಯಾಕಿಂಗ್ ಮಾತ್ರ ಮಾಡಿ ಅದಕ್ಕೆ ಕಮಿಷನ್ ಪಡೆಯುವದು ವಾಡಿಕೆ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹೊಸ ನಿಯಮವನ್ನು ತಾವೇ ರೂಪಿಸಿಕೊಂಡಿದ್ದಾರೆ ಎಂದು ಆರೋಪಿಸಿದÀರು.

ಕಳೆದ ಅಕ್ಟೋಬರ್‍ನಲ್ಲಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಅವರು ವಿಷಯ ಪ್ರಸ್ತಾಪಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಜನತಾ ಬಜಾರ್ ನಿಂದಲೇ ಸಾಮಗ್ರಿ ಖರೀದಿಸ ಬೇಕೆಂದು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ವಾಗಿತ್ತು. ಆದರೆ ಅಧಿಕಾರಿ ಈ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯ ಕಾರ್ಯರೂಪಕ್ಕೆ ಬರದಿರುವ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮತ್ತೆ ಈ ಬಗ್ಗೆ ಪ್ರಸ್ತಾಪವಾಗಿ ಮತ್ತು ಎಂಎಸ್‍ಪಿಟಿಸಿಯಲ್ಲಿ ಹಣದ ಕೊರತೆ ಇರುವದರಿಂದ ಮುಂದೆ ಜನತಾ ಬಜಾರ್‍ನಿಂದ ಸಾಮಗ್ರಿ ಖರೀದಿಸ ಬೇಕೆಂದು ಕೊನೆಯ ಆದೇಶವನ್ನು ಅಧ್ಯಕ್ಷರು ನೀಡಿದ್ದರು.

ಇದನ್ನು ಕೂಡ ಅಧಿಕಾರಿ ಪಾಲಿಸದೆ ಇರುವುದರಿಂದ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ರವಿಬಸಪ್ಪ ಸಹಕಾರ ಸಂಘಗಳ ಬೆಳವಣಿಗೆಗೆ ಜಿಲ್ಲಾಡಳಿತ ಸಹಕಾರ ನೀಡಬೇಕೆಂದರು. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಸಹಕಾರದೊಂದಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗು ವದಲ್ಲದೆ, ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ನೀಡಲಾಗುವದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜನತಾ ಬಜಾರ್ ಉಪಾಧ್ಯಕ್ಷ ಪಿ.ಯು. ಮಾದಪ್ಪ, ನಿರ್ದೇಶಕರು ಗಳಾದ ಕೆದಂಬಾಡಿ ಎಸ್.ಪ್ರಕಾಶ್, ಧರ್ಮಪಾಲ(ಪ್ರಭು), ಪ್ರೇಮಾ ಸೋಮಯ್ಯ ಹಾಗೂ ಬೇಬಿ ಪೂವಯ್ಯ ಉಪಸ್ಥಿತರಿದ್ದರು.