ಮಡಿಕೇರಿ, ಏ. 4: ಮುನ್ನೂರಕ್ಕೂ ಅಧಿಕ ಮಂದಿ ಕುಟುಂಬಸ್ಥರು ಕುಡಿಯುವ ನೀರಿನ ತೆರೆದ ಬಾವಿಗೆ ವಿಷ ಪ್ರಯೋಗ ಮಾಡಿದ್ದು, ಗ್ರಾಮಸ್ಥರ ಅರಿವಿಗೆ ಬಂದ ಹಿನ್ನೆಲೆಯಲ್ಲಿ ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ದೇವರ ಮೊರೆ ಹೋಗುವದಾಗಿ ಹೇಳಿದ ಗ್ರಾಮಸ್ಥರ ಹೇಳಿಕೆಗೆ ಹೆದರಿದ ಆರೋಪಿ ತಾನೇ ವಿಷ ಪ್ರಯೋಗ ಮಾಡಿರುವದಾಗಿ ಒಪ್ಪಿಕೊಂಡ ಮೇರೆಗೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಒಂದೆಡೆ ಬತ್ತುತ್ತಿರುವ ಅಂತರ್ಜಲ ಮಟ್ಟ, ಇನ್ನೊಂದೆಡೆ ನೀರಿನ ಬವಣೆಯಿಂದ ಪರಿತಪಿಸುತ್ತಿರುವ ಜನತೆ. ದಿನದಿಂದ ದಿನಕ್ಕೆ ನೀರಿನ ಅಭಾವ ಉಂಟಾಗುತ್ತಿದೆ. ಈ ಮಧ್ಯೆ ಇಲ್ಲಿಗೆ ಸಮೀಪದ ಬಿಳಿಗೇರಿ ಗ್ರಾಮದ ಬಕ್ಕ ಬಾಣೆಯಲ್ಲಿರುವ ಸುಮಾರು 300 ಕುಟುಂಬಸ್ಥರಿಗೆ ಕುಡಿಯುವ ನೀರಿನ ಆಸರೆಯಾಗಿರುವ ತೆರೆದ ಬಾವಿಗೆ ಮಂಜುನಾಥ ಎಂಬಾತ ವಿಷ ಪ್ರಯೋಗ ಮಾಡಿದ್ದು, ಇಂದು ಪೊಲೀಸರ ಬಂಧಿಯಾಗಿದ್ದಾನೆ.

ಬಿಳಿಗೇರಿ ಗ್ರಾಮದಲ್ಲಿ ಕಳೆದ 10 ದಿನಗಳಿಂದ ನೀರು ಪೂರೈಸುವ ಬೋರ್‍ವೆಲ್‍ನ ಮೋಟಾರ್ ದುರಸ್ತಿಗೊಂಡ ಹಿನ್ನೆಲೆಯಲ್ಲಿ ಜನರು ನೀರಿಗಾಗಿ ಪರಿತಪಿಸುವಂತಾಗಿತ್ತು. ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಷ್ಟರಲ್ಲಿ ಇದೇ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಮಂಜುನಾಥ ಎಂಬಾತ ನೀರು ಸರಬರಾಜಾಗುವ ತೆರೆದ ಬಾವಿಗೆ ವಿಷ ಪ್ರಯೋಗ ಮಾಡಿ ನೀರನ್ನು ಕಲುಷಿತಗೊಳಿಸಿದ್ದಾನೆ. ಇದರಿಂದ ನೀರಿನಲ್ಲಿದ್ದ ಜಲಚರಗಳಾದ ಮೀನು, ಏಡಿ, ಕಪ್ಪೆಗಳು ಸಾವನ್ನಪ್ಪಿ ನೀರಿನಲ್ಲಿ ತೇಲುತ್ತಿದ್ದವು.

(ಮೊದಲ ಪುಟದಿಂದ) ತಾ. 2 ರಂದು ಬೆಳಿಗ್ಗೆ ಮೋಟಾರ್ ಅಳವಡಿಸಲು ಬಂದಾಗ ಸತ್ತ ಮೀನುಗಳ ವಾಸನೆ ಹಾಗೂ ತೇಲುತ್ತಿದ್ದ ಮೀನುಗಳಿಂದಾಗಿ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಸ್ಥಳೀಯ ಗ್ರಾ.ಪಂ. ಸದಸ್ಯೆ ಪುಷ್ಪಾ ನಾಣಯ್ಯ ಅವರು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.

ಬಳಿಕ ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಾಲಯದಲ್ಲಿ ಗ್ರಾಮಸ್ಥರು ಹರಕೆ ಹೊತ್ತುಕೊಳ್ಳುವದಾಗಿ ಹೇಳಿ ಅಲ್ಲಿಗೆ ತೆರಳಿದಾಗ ತನ್ನ ಮನೆಯಲ್ಲಿದ್ದ ಮಂಜುನಾಥ್ ತಾನೇ ಬಾವಿಗೆ ವಿಷ ಪ್ರಯೋಗ ಮಾಡಿರುವದಾಗಿ ಗ್ರಾಮಸ್ಥರೊಬ್ಬರಿಗೆ ಮೊಬೈಲ್ ಮೂಲಕ ಮಾಹಿತಿಯಿತ್ತು, ತಪ್ಪೊಪ್ಪಿಕೊಂಡಿದ್ದಾನೆ. ದೇವರಲ್ಲಿ ಇದಕ್ಕಾಗಿ ಪ್ರಾರ್ಥಿಸಬೇಡಿ ಎಂದು ಕೋರಿಕೊಂಡಿದ್ದಾನೆ. ನಂತರ ಗ್ರಾಮಸ್ಥರು ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 328ರಡಿ ಮೊಕದ್ದಮೆ ದಾಖಲಿಸಿ, ತಕ್ಕ ಶಿಕ್ಷೆ ಅಗತ್ಯ: ಕಾಂತ ಕಾವೇರಪ್ಪ

ಮನುಷ್ಯತ್ವ ಇದ್ದವನು ಇಂತಹ ಕೆಟ್ಟ ಕೆಲಸ ಮಾಡುವದಿಲ್ಲ. ಮೋಟಾರ್ ದುರಸ್ತಿಯಾಗಿರುವದು ದೇವರ ಕೊಡುಗೆಯಾಗಿದೆ. ಇಲ್ಲದಿದ್ದಲ್ಲಿ ಬಾವಿ ನೀರು ಕುಡಿದ 300 ಕುಟುಂಬಸ್ಥರಿಗೂ ದೊಡ್ಡ ಅಪಾಯವಾಗುತ್ತಿತ್ತು. ದೇವರು ದೊಡ್ಡವನು. ಆರೋಪಿ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮಾಜಿ ತಾ.ಪಂ. ಸದಸ್ಯ ಕಾಂತ ಕಾವೇರಪ್ಪ ಹೇಳಿದರು.

ಕಠಿಣ ಕ್ರಮಕ್ಕೆ ಆಗ್ರಹ

ಬಾವಿಗೆ ವಿಷ ಪ್ರಯೋಗ ಮಾಡಿದ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬಿಳಿಗೇರಿ ಗ್ರಾಮದ ನೂರಾರು ಮಂದಿ ಗ್ರಾಮಸ್ಥರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಜಮಾಯಿಸಿ ಗ್ರಾಮಾಂತರ ವೃತ್ತ ನಿರೀಕ್ಷಕರನ್ನು ಆಗ್ರಹಿಸಿದರು.

ಈ ಸಂದರ್ಭ ವೃತ್ತ ನಿರೀಕ್ಷಕ ಪ್ರದೀಪ್ ಅವರು ಆರೋಪಿಯ ಬಂಧನವಾಗಿದೆ. ಕಾನೂನು ಕ್ರಮಕೈಗೊಳ್ಳುವದಾಗಿ ನೀಡಿದ ಭರವಸೆ ಮೇರೆಗೆ ಗ್ರಾಮಸ್ಥರು ಠಾಣೆಯಿಂದ ಹಿಂತೆರಳಿದರು.