ಕುಶಾಲನಗರ, ಏ. 4: ಕೊಡಗು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ರಕ್ತ ವಿಂಗಡಣಾ ಘಟಕ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದು ರಕ್ತನಿಧಿ ಕೇಂದ್ರದ ವೈದ್ಯೆ ಡಾ. ಬಿ.ಎನ್. ನಾಗಲಕ್ಷ್ಮಿ ಮಾಹಿತಿ ನೀಡಿದರು.

ಕುಶಾಲನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವಾರ್ಷಿಕ 1500 ಯೂನಿಟ್ಸ್ ಪ್ರಮಾಣದ ರಕ್ತ ಜಿಲ್ಲೆಯಲ್ಲಿ ಸಂಗ್ರಹವಾಗುತ್ತಿದ್ದು ಇದನ್ನು 2500 ಯೂನಿಟ್ಸ್‍ಗೆ ಏರಿಕೆ ಮಾಡಬೇಕಾಗಿದೆ. ಕಳೆದ ವರ್ಷದಲ್ಲಿ 34 ರಕ್ತದಾನ ಶಿಬಿರಗಳು ನಡೆದಿದ್ದು 1300 ರಿಂದ 1500 ಯೂನಿಟ್‍ಗಳಷ್ಟು ಸಂಗ್ರಹವಾಗಿವೆ. ಪ್ರತೀ ಶಿಬಿರದಲ್ಲಿ 45 ರಿಂದ 50 ಯೂನಿಟ್‍ಗಳಷ್ಟು ರಕ್ತ ಸಂಗ್ರಹವಾಗುತ್ತಿದೆ ಎಂದು ಮಾಹಿತಿ ಒದಗಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಗಳು ಏರ್ಪಡಿಸುವ ನಿಟ್ಟಿನಲ್ಲಿ ಸಂಘ - ಸಂಸ್ಥೆಗಳು ಕಾರ್ಯೋನ್ಮುಖ ವಾಗಬೇಕಾಗಿದೆ ಎಂದು ಡಾ.ನಾಗಲಕ್ಷ್ಮಿ ಮನವಿ ಮಾಡಿದರು.

ಜಿಲ್ಲಾ ರಕ್ತನಿಧಿಗೆ ವಾಹನ ವ್ಯವಸ್ಥೆ, ಸಿಬ್ಬಂದಿಗಳ ಕೊರತೆ ಇರುವದಾಗಿ ತಿಳಿಸಿದ ಅವರು, ಪ್ರಸಕ್ತ ಕೇವಲ 4 ಮಂದಿ ತಂತ್ರಜ್ಞರು, ಇಬ್ಬರು ದಾದಿಯರು ಇದ್ದಾರೆ.

ಕುಶಾಲನಗರ ಮತ್ತು ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹಣಾ ಘಟಕ ಸ್ಥಾಪನೆಯಾಗಲಿದ್ದು ಪರಿಣತ ತಜ್ಞರ ನೇಮಕ ಮಾಡಲು ಇಲಾಖೆ ಚಿಂತಿಸಿದೆ ಎಂದು ತಿಳಿಸಿದ್ದಾರೆ.