ಸೋಮವಾರಪೇಟೆ,ಏ.4: ಸರ್ಕಾರದ ಸೇವೆಗಳು, ನೂತನ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಇಲ್ಲಿನ ಪ.ಪಂ. ಸಭಾಂಗಣದಲ್ಲಿ ನೂತನವಾಗಿ ಅಳವಡಿಸಿರುವ ಅಂತರ್ಜಾಲ ನಿರ್ವಹಣೆಯ ಎಲ್‍ಇಡಿ ಟಿ.ವಿ. ಸೇವೆಗೆ ಶಾಸಕ ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ, ಸಾರ್ವಜನಿಕ ಕುಂದು ಕೊರತೆ, ದೂರು, ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ, ನಲ್ಲಿ ಸಂಪರ್ಕ, ನಮೂನೆ-3 ಹಾಗೂ ಖಾತೆ ಬದಲಾವಣೆ, ಜನನ-ಮರಣ ಪ್ರಮಾಣ ಪತ್ರ, ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳ ವಿಲೇವಾರಿ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಹಾಗೂ ಸೇವೆಯನ್ನು ಪಡೆಯುವ ವಿಧಾನ ಹಾಗೂ ಅವಶ್ಯಕತೆ ಇರುವ ದಾಖಲೆಗಳನ್ನು ಎಲ್‍ಇಡಿ ಟಿವಿಯ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ ಎಂದರು.

ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಂತರ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಕುರಿತಂತೆ ಸಭೆ ನಡೆಯಿತು. ಸಿದ್ದಲಿಂಗಪುರ, ಕರ್ಕಳ್ಳಿ, ಭುವನಗಿರಿ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಎದುರಾಗಿರುವ ಅಡ್ಡಿ, ಪಟ್ಟಣದಲ್ಲಿ ತ್ಯಾಜ್ಯ ಸಂಗ್ರಹಗೊಳ್ಳದೆ ಉಂಟಾಗಿರುವ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು.