ಮಡಿಕೇರಿ, ಏ. 4: ಜನಸಾಮಾನ್ಯರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾಳಜಿ ವಹಿಸುವದರೊಂದಿಗೆ ಮಾಧ್ಯಮಗಳು ನೈಜ ಸುದ್ದಿಯನ್ನು ಬಿತ್ತರಿಸು ವಂತಾಗಬೇಕು. ಯಾವದೇ ಸುದ್ದಿಯ ವೈಭವೀಕರಣ ಸಲ್ಲದು ಎಂದು ಹಿರಿಯ ರಾಜಕೀಯ ಮುತ್ಸದ್ಧಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಅಭಿಪ್ರಾಯಪಟ್ಟರು.

ಶ್ರೀ ರಾಮನವಮಿ ದಿನ ಲೋಕಾರ್ಪಣೆಗೊಳ್ಳಲಿರುವ ನೂತನ ದೃಶ್ಯಮಾಧ್ಯಮ ದಿಗ್ವಿಜಯ ಚಾನೆಲ್‍ನ ಮಡಿಕೇರಿ ಕಚೇರಿಯನ್ನು ಪತ್ರಿಕಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ರೇಕಿಂಗ್’ ಸುದ್ದಿಗಳು ದೃಶ್ಯಮಾದ್ಯಮಕ್ಕೆ ದೊಡ್ಡ ಅಸ್ತ್ರವಾಗಿದೆ. ಇದರಿಂದ ತಕ್ಷಣದ ವಿಮರ್ಶೆ ಕಷ್ಟ. ಆದರೆ ಪತ್ರಿಕೆಯನ್ನು ಓದಿದಾಗ ಮಿಮರ್ಶೆ ಮಾಡಬಹುದು. ಸುದ್ದಿ ಪ್ರಕಟಿಸುವದು ಎರಡೂ ಮಾಧ್ಯಮದ ಕರ್ತವ್ಯವಾಗಿದೆ. ವಿಮರ್ಶೆಯನ್ನು ವೀಕ್ಷಕರು ಹಾಗೂ ಓದುಗರಿಗೆ ಬಿಡಬೇಕು. ಮಾಧ್ಯಮಗಳಿಗೆ ನಿಯಂತ್ರಣ ಹೇರುವ ಬಗ್ಗೆ ಚರ್ಚೆಯಾಗುತ್ತಿದೆ. ಇದು ಅಪ್ರಸ್ತುತವೋ ಎಂಬದರ ಬಗ್ಗೆ ಚರ್ಚೆಯಾಗಬೇಕೆಂದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಕಸ್ತೂರಿ ಗೋವಿಂದಮ್ಮಯ್ಯ, ಅಂತರ್ರಾಷ್ಟ್ರೀಯ ಹಾಕಿ ಆಟಗಾರ ವಿಕ್ರಂಕಾಂತ್ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ವಿಜಯವಾಣಿ ಜಿಲ್ಲಾ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ವಹಿಸಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ದಿಗ್ವಿಜಯ ಸುದ್ದಿವಾಹಿನಿಯ ಜಿಲ್ಲಾ ವರದಿಗಾರ ಕಿಶೋರ್ ರೈ ಕಾರ್ಯಕ್ರಮ ನಿರೂಪಿಸಿ, ವಿಜಯವಾಣಿ ವೀರಾಜಪೇಟೆ ವರದಿಗಾರ ಪಾರ್ಥ ಚಿಣ್ಣಪ್ಪ ಪ್ರಾರ್ಥಿಸಿದರೆ, ಸಿದ್ದಾಪುರ ವರದಿಗಾರ ಅಜೀಜ್ ವಂದಿಸಿದರು.