ಸಿದ್ದಾಪುರ, ಏ. 4: ಸಿದ್ದಾಪುರ ಗ್ರಾ.ಪಂ ಗೆ ಒಳಪಡುವ ಕರಡಿಗೋಡು ವಿನ ಅರಣ್ಯ ಹಕ್ಕು ಸಮಿತಿಯ ಗ್ರಾಮಸಭೆ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಎಂ.ಸಿ ವಾಸು ಅಧ್ಯಕ್ಷತೆಯಲ್ಲಿ ನಡೆಯಿತು.

ಹಾಡಿಯ ವಿವಿಧ ಮೂಲಭೂತ ಸೌಲಭ್ಯಗಳ ಬಗ್ಗೆ ಹಾಡಿಯ ನಿವಾಸಿಗಳು ಜಿ.ಪಂ ಸದಸ್ಯೆ ಸರಿತಾ ಪೂಣಚ್ಚರಿಗೆ ಮನವಿ ಪತ್ರ ಸಲ್ಲಿಸಿ ರಸ್ತೆ, ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸರಕಾರದ ಮೂಲಕ ಒದಗಿಸಿಕೊಡುವಂತೆ ಒತ್ತಾಯಿಸಿದರು. ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ವಾಸು ಮಾತನಾಡಿ, 50-60 ವರ್ಷಗಳಿಂದ ಸಂಕಷ್ಟದ ಬದುಕನ್ನು ಸಾಗಿಸುತ್ತಿದ್ದ ಹಾಡಿ ನಿವಾಸಿಗಳ ಬಾಳಲ್ಲಿ ಸರಿತಾ ಪೂಣಚ್ಚ ಅವರ ಪ್ರಯತ್ನದಿಂದಾಗಿ ಬೆಳಕು ಮೂಡಿದ್ದು ವಿದ್ಯುತ್, ರಸ್ತೆ, ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವ ಮೂಲಕ ತಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆಂದು ಅಭಿನಂದನೆ ಸಲ್ಲಿಸಿದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಮಣಿ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯ್ತಿಯಲ್ಲಿ ಸರ್ವರ ಸಹಕಾರದೊಂದಿಗೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಜಿ.ಪಂ.ಸದಸ್ಯೆ ಸರಿತಾ ಪೂಣಚ್ಚ ಅವರ ಪ್ರಯತ್ನ ದಿಂದಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಗ್ರಾ.ಪಂ.ಗೆ ಸುಮಾರು 50ಲಕ್ಷ ರೂ.ಗಳ ಅನುದಾನವನ್ನು ಕೊಡಿಸಿದ್ದು, ಅರಣ್ಯದ ಅಂಚಿನಲ್ಲಿರುವ ಅವರೆಗುಂದ ಹಾಡಿಗೆ ಮೂಲಭೂತ ಸೌಲಭ್ಯವನ್ನು ದೊರಕಿಸುವಲ್ಲಿ ಸರಿತಾ ಪೂಣಚ್ಚ ಶ್ರಮಿಸಿದ್ದಾರೆಂದು ಶ್ಲಾಘಿಸಿದರು.

ಜಿ.ಪಂ.ಸದಸ್ಯೆ ಸರಿತಾ ಪೂಣಚ್ಚ ಕುಡಿಯುವ ನೀರಿಗೆ ಚಾಲನೆ ನೀಡಿದ ನಂತರ ಮಾತನಾಡಿ, ಮಾಜಿ ಸಚಿವ ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವ ಸೀತಾರಾಮ್ ಹಾಗೂ ಅಧಿಕಾರಿಗಳ ಪ್ರಯತ್ನದಿಂದ ಹಾಗೂ ತಮ್ಮ ಪರಿಶ್ರಮದಿಂದ ಹಾಡಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಹಾಡಿಯ ಮನೆಮನೆಗಳಿಗೆ ಸೋಲಾರ್ ದೀಪವನ್ನು ಅಳವಡಿಸಲಾಗುವದು ಎಂದು ಭರವಸೆ ನೀಡಿದರಲ್ಲದೇ ಸರ್ಕಾರ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವದರ ಮೂಲಕ ಹಾಡಿ ನಿವಾಸಿಗಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು. ಈ ಸಂದರ್ಭ ಸರಿತಾ ಅವರನ್ನು ಸನ್ಮಾನಿಸ ಲಾಯಿತು. ಸಿದ್ದಾಪುರ ಗ್ರಾ.ಪಂ. ಸದಸ್ಯರು ಗಳಾದ ಶಾರದ, ಪೂವಮ್ಮ, ಸುಶೀಲಾ, ಪ್ರೇಮ, ಹಾಡಿಯ ನಿವಾಸಿಗಳಾದ ಉತ್ತಯ್ಯ, ಚಂಗಪ್ಪ, ಸುಶೀಲ, ಸರೋಜ, ಮತ್ತಿತರರು ಹಾಜರಿದ್ದರು.