ವೀರಾಜಪೇಟೆ, ಏ. 4: ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ತಂದೆಯ ಕಾರು ಸಹಿತ ನಾಪತ್ತೆ ಯಾಗಿರುವ ಪ್ರಕರಣ ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಅಪ್ರಾಪ್ತ ವಯಸ್ಸಿನವಳಾಗಿದ್ದು ಅಪಹರಣ ಶಂಕೆಯಂತೆ ದೂರು ದಾಖಲಾಗಿದೆ.ತಾ. 3 ರಂದು ಬೆಳಿಗ್ಗೆ ಮನೆಯಲ್ಲಿದ್ದ ಯುವತಿ ತಂದೆ ಮನೆಯಿಂದ ಹೊರ ತೆರಳಿದ್ದ ಸಂದರ್ಭ ನಾಪತ್ತೆಯಾಗಿದ್ದಾಳೆ. ಹುಡುಕಾಟ ನಡೆಸಿದ ಸಂದರ್ಭ ಈಕೆ ಕಾರು ಚಾಲನೆ ಮಾಡಿಕೊಂಡು ಗೋಣಿಕೊಪ್ಪಲು ಕಡೆಗೆ ತೆರಳಿರುವದು ತಿಳಿದು ಬಂದಿದೆ. ನೆಂಟರಿಷ್ಟರಲ್ಲಿ ಹಾಗೂ ಸ್ನೇಹಿತ ವಲಯದಲ್ಲಿ ವಿಚಾರಿಸಿದರೂ ಸುಳಿವು ದೊರೆಯದೆ ಪೊಲೀಸರಿಗೆ ದೂರು ನೀಡಲಾಗಿದೆ.

ಈಕೆ ಪಿಯುಸಿಯಲ್ಲಿ ಅನುತ್ತೀರ್ಣಳಾಗಿದ್ದು ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲವೆನ್ನಲಾಗಿದೆ. ಈ ಬಗ್ಗೆ ಸುಳಿವು ದೊರೆತಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ (08274-257462), ವೃತ್ತ ನಿರೀಕ್ಷಕರ ಕಚೇರಿ ಅಥವಾ ಜಿಲ್ಲಾ ಪೊಲೀಸ್ ಕಚೇರಿ (229000)ಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.