ಕುಶಾಲನಗರ, ಏ. 4: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗಿದೆ. ಬಹುದಿನಗಳಿಂದ ಬಿರು ಬೇಸಿಗೆಯ ಧಗೆಯಿಂದ ಅಧಿಕ ತಾಪಮಾನಕ್ಕೆ ಒಳಗಾದ ಪ್ರದೇಶಗಳಲ್ಲಿ ಮಳೆಯ ಸಿಂಚನ ವಾತಾವರಣವನ್ನು ತಂಪಾಗಿಸಿದೆ. ಭಾರೀ ಗಾಳಿ ಬೀಸಿದ ಹಿನ್ನಲೆಯಲ್ಲಿ ಅಲ್ಲಲ್ಲಿ ಮರದ ಸಣ್ಣಪುಟ್ಟ ರೆಂಬೆಗಳು ರಸ್ತೆಗೆ ಅಡ್ಡಲಾಗಿ ಬಿದ್ದ ದೃಶ್ಯ ಕಂಡುಬಂತು. ಈ ಹಿನ್ನಲೆಯಲ್ಲಿ ಜನಜೀವನ ಸ್ವಲ್ಪಕಾಲ ಅಸ್ತವ್ಯಸ್ಥವಾಯಿತು.

ಯಾವದೇ ಅಪಾಯದ ಬಗ್ಗೆ ವರದಿಯಾಗಿಲ್ಲ. ಕುಶಾಲನಗರ ಪಟ್ಟಣದಲ್ಲಿ ಸಂತೆ ದಿನವಾದ ಕಾರಣ ನಾಗರಿಕರು ಮಳೆಯಲ್ಲೇ ಓಡಾಡಬೇಕಾದ ಪರಿಸ್ಥಿತಿ ಸೃಷ್ಠಿಯಾಯಿತು. ಗಾಳಿಯಿಂದ ಮಾರುಕಟ್ಟೆ ವ್ಯಾಪಾರಿಗಳ ಟೆಂಟ್‍ಗಳು ನೆಲಕ್ಕುರುಳಿದ್ದು ಯಾವದೇ ಅಪಾಯ ಸಂಭವಿಸಿಲ್ಲ. ಕುಶಾಲನಗರ ಸಮೀಪ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರದ ಹೊರಭಾಗದಲ್ಲಿ ಖಾಸಗಿ ಅಂಗಡಿ ಮುಂಗಟ್ಟುಗಳ ಮಳಿಗೆಗಳಲ್ಲಿ ಚರಂಡಿ ಅವ್ಯವಸ್ಥೆ ಹಿನ್ನಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಅಂಗಡಿ ಮಳಿಗೆಗಳ ಒಳಗೆ ಸೇರಿ ಸರಕು ಸರಂಜಾಮುಗಳು ನೀರಿನಿಂದ ಆವೃತ್ತವಾದ ಕಾರಣ ವ್ಯಾಪಾರಿಗಳು ಆತಂಕ ಪಡುವಂತಾಯಿತು. ಆನೆಕಾಡು ಅತ್ತೂರು ಅರಣ್ಯ ವಲಯದಲ್ಲಿ ಇದೇ ಪ್ರಥಮ ಬಾರಿಗೆ ಮಳೆ ಸುರಿದಿದ್ದು ಬೆಂಕಿ ಅನಾಹುತಕ್ಕೆ ಒಳಗಾದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಭೂಮಿಗೆ ಬಿದ್ದ ಮಳೆ ತಂಪೆರೆದಂತಾಗಿದೆ.

ಕೂಡಿಗೆಯಲ್ಲಿ ಮಳೆ

ಕೂಡಿಗೆ: ವರ್ಷದ ಪ್ರಥಮ ಮಳೆಯಾಗಿ ಯುಗಾದಿ ಹಬ್ಬದ ನಂತರ ಇಂದು ಮಧ್ಯಾಹ್ನ ಭಾರಿ ಗುಡುಗಿನೊಂದಿಗೆ ಮಳೆ ಸುರಿಯಿತು. ಇದರಿಂದ ಕೂಡಿಗೆ, ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿ ಯ ಗ್ರಾಮಗಳಿಗೆ ಸಣ್ಣ ಪ್ರಮಾಣದಲ್ಲಿ ತಂಪೆರೆದಂತಾಗಿದೆ.