ಸೋಮವಾರಪೇಟೆ,ಏ.4: ಸಮಾಜದ ಪ್ರತಿಯೊಂದು ವಿಭಾಗಗಳಿಗೆ ಅವರದೇ ಆದ ಸಂಘಟನೆಗಳಿದ್ದು, ಜನರಿಂದ ನೇರವಾಗಿ ಚುನಾಯಿಸಲ್ಪಟ್ಟ ಗ್ರಾಮ ಪಂಚಾಯಿತಿಯ ಪ್ರತಿನಿಧಿಗಳೂ ಸಹ ಸಂಘಟಿತರಾಗುವ ಮೂಲಕ ಸೌಲಭ್ಯ ಪಡೆಯುವಂತಾಗಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜನ್ ಹೇಳಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ವತಿಯಿಂದ ಇಲ್ಲಿಗೆ ಸಮೀಪದ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾಹಿತಿ ನೀಡಿದರು.

ಸದಸ್ಯರ ಪ್ರತಿಯೊಂದು ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಕರ್ನಾಟಕದಲ್ಲಿ ಜಾರಿಯಲ್ಲಿರುವ ರಮೇಶ್ ಕುಮಾರ್ ವರದಿಯನ್ವಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ದೊರಕಬೇಕಾದ ಹಲವು ವಿಷಯಗಳ

(ಮೊದಲ ಪುಟದಿಂದ) ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ ಎಂದರು.

ಪಂಚಾಯತ್‍ನ ಪ್ರತಿನಿಧಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ, ಜಾಗೃತಿ ಮತ್ತು ರಾಷ್ಟ್ರ ಪ್ರಜ್ಞೆಯನ್ನು ಬಲಪಡಿಸಿ, ಪ್ರಜಾಪ್ರಭುತ್ವದ ತಳಹದಿಯಾದ ಗ್ರಾಮ ಸ್ವರಾಜ್ಯ, ಜನರ ಸಬಲೀಕರಣ, ಅಧಿಕಾರ ವಿಕೇಂದ್ರಿಕರಣದತ್ತ ಹೆಚ್ಚಿನ ಒತ್ತು ನೀಡಿ ಆಡಳಿತವನ್ನು ತಳಮಟ್ಟದಿಂದ ಸಂಘಟಿಸುವದೇ ಸಂಘಟನೆಯ ಗುರಿಯಾಗಿದೆ ಎಂದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಮತ್ತು ಜವಾಬ್ದಾರಿಗಳನ್ನು ನೀಡಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಯುವಕರನ್ನು ಸಂಘಟಿಸುವ ಮೂಲಕ ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕಾಗಿದೆ.

ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಸಂದೀಪ್, ರಾಜ್ಯ ವಲಯ ಸಂಯೋಜಕ ರಂಗಸ್ವಾಮಿ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ತೆನ್ನೀರ ಮೈನಾ ಮಾತನಾಡಿದರು. ವಲಯ ಅಧ್ಯಕ್ಷ ಆನಂದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎನ್. ಬಸವರಾಜು ಉಪಸ್ಥಿತರಿದ್ದರು.