ಕುಶಾಲನಗರ, ಏ. 4: ದಕ್ಷಿಣ ಕನ್ನಡ ಜಿಲ್ಲೆಯಿಂದ ಮರಳು ಸಾಗಾಟ ಮಾಡಲು ಅಲ್ಲಿನ ಜಿಲ್ಲಾಡಳಿತ ಅನುಮತಿ ನೀಡಿದೆ. ಏಪ್ರಿಲ್ 1 ರಿಂದ ಅನ್ವಯವಾಗುವಂತೆ 10 ದಿನಗಳ ಅವಧಿಯಲ್ಲಿ ರಾಜ್ಯದಾದ್ಯಂತ ಮರಳು ಸಾಗಾಟಕ್ಕೆ ಪರ್ಮಿಟ್ ನೀಡಲು ಅವಕಾಶ ಕಲ್ಪಿಸಿದ್ದು ಇದೀಗ ಜಿಲ್ಲೆ ಸೇರಿದಂತೆ ಎಲ್ಲೆಡೆ ಕಟ್ಟಡ ನಿರ್ಮಾಣಕ್ಕೆ ಅವಶ್ಯಕತೆ ಇರುವ ಮರಳು ದೊರೆಯುವ ಅವಕಾಶ ಲಭ್ಯವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ತಟದಲ್ಲಿ ಮರಳು ನೀತಿಯನ್ವಯ 10 ಸಾವಿರ ಲೋಡ್‍ಗಳಿಗೂ ಅಧಿಕ ಮರಳು ಸಂಗ್ರಹ ಮಾಡಲಾಗಿದ್ದು ಮರಳು ಸಾಗಾಟಕ್ಕೆ ಅಲ್ಲಿನ ಜಿಲ್ಲಾಡಳಿತ ಕೇವಲ 10 ದಿನಗಳ ಅವಧಿಗೆ ಮೀಸಲಾದಂತೆ ಈ ಆದೇಶ ಹೊರಡಿಸಿದೆ. ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ಲಾರಿಯೊಂದಕ್ಕೆ ರೂ. 45 ರಿಂದ 50 ಸಾವಿರ ದರದಂತೆ ಮರಳು ಮಾರಾಟವಾಗುತ್ತಿದ್ದು, ಈ ಆದೇಶದ ಅನುಸಾರ ಗ್ರಾಹಕರಿಗೆ ಸರಿಸುಮಾರು ರೂ 30 ಸಾವಿರದಂತೆ ಮರಳು ಲಭಿಸಲಿದೆ ಎನ್ನುವ ಮಾಹಿತಿ ದೊರಕಿದೆ. -ಸಿಂಚು