*ನಾಪೋಕ್ಲು, ಏ. 4: ಕ್ರೀಡೆ ಆರೋಗ್ಯಕರ ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆಯಾಗಬೇಕೆ ಹೊರತು ವ್ಯಾಪಾರೀಕರಣ ವಾಗಬಾರದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಪಾಡಿಯಮ್ಮನ ಮುರುಳಿ ಕರುಂಬಮ್ಮಯ್ಯ ಅಭಿಪ್ರಾಯಪಟ್ಟರು.

ಅವರು ಸ್ಥಳೀಯ ಸರಕಾರಿ ಪದವಿ ಕಾಲೇಜಿನ ಆವರಣದಲ್ಲಿ ನಡೆದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿಯ 17ನೇ ವರ್ಷದ ಮಕ್ಕಳ ಕ್ರೀಡಾ ಮತ್ತು ಸಾಂಸ್ಕøತಿಕ ತರಬೇತಿ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು,

ಗ್ರಾಮೀಣ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳಿಗೆ ಪೂರಕವಾಗಿ ಅಕಾಡೆಮಿ ಇಂತಹ ಬೇಸಿಗೆ ಶಿಬಿರವನ್ನು ಆಯೋಜಿಸಿರುವುದು ಪ್ರಶಂಸನೀಯ ವಾಗಿದ್ದು, ಪೋಷಕರು ಈ ನಿಟ್ಟಿನಲ್ಲಿ ಸದುಪಯೋಗವನ್ನು ಪಡೆದುಕೊಂಡು ರಜಾ ದಿನದಲ್ಲಿ ಮಕ್ಕಳು ಕ್ರಿಯಾಶೀಲರಾಗುವಂತೆ ಗಮನ ಹರಿಸುವಂತಾಗಬೇಕು ಎಂದರು. ಇನ್ನೋರ್ವ ಅತಿಥಿ ಮೇಜರ್ ಬಲ್ಲಚಂಡ ತಿಮ್ಮಯ್ಯ ಅವರು ಹಾಕಿ ಸ್ಟಿಕ್‍ನಿಂದ ಚೆಂಡನ್ನು ತಳ್ಳುವ ಮೂಲಕ ಕ್ರೀಡೆಗೆ ಚಾಲನೆ ನೀಡಿ, ಕ್ರೀಡೆಯು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಲು ಹಾಗೂ ಶಿಸ್ತು ಬದ್ಧ ಜೀವನ ನಡೆಸಲು ಸಹಕಾರಿಯಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ವಹಿಸಿ, ಸ್ವಾಗತಿಸಿದರು. ಪ್ರತಿವರ್ಷ 50 ಕ್ಕೂ ಅಧಿಕ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಇದರಿಂದ ಮಕ್ಕಳ ಮುಂದಿನ ಭವಿಷ್ಯಕ್ಕೆ ಪೂರಕವಾಗಿದೆ ಎಂದ ಅವರು ಈ ತರಬೇತಿ ಇಂದಿನಿಂದ ಪ್ರತಿ ದಿನ ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ 1 ತಿಂಗಳ ಕಾಲ ಜರುಗಲಿದೆ. ಹಾಲು ಹಾಗೂ ಮೊಟ್ಟೆಯನ್ನು ಶಿಬಿರಾರ್ಥಿಗಳಿಗೆ ನೀಡಲಾಗುತ್ತಿದ್ದು, ಕೊನೆಯಲ್ಲಿ ಚಾರಣವನ್ನು ಆಯೋಜಿಸಲಾಗಿದೆ ಎಂದರು.

ಅರೆಯಡ ದಿಪ್ನದೇವಯ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಅಕಾಡೆಮಿ ಉಪಾಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ವಂದಿಸಿದರು.