ಸೋಮವಾರಪೇಟೆ, ಏ. 4: ಬೆಂಗಳೂರು ಸೇರಿದಂತೆ ಹೊರ ಭಾಗದಲ್ಲಿ ನೆಲೆಸಿರುವ ಸ್ಥಳೀಯರ ತೋಟಗಳನ್ನು ಗುರುತು ಮಾಡಿಕೊಂಡು ಅಕ್ರಮವಾಗಿ ಮರ ಕಡಿಯುತ್ತಿದ್ದ ಸಂದರ್ಭ ಪೊಲೀಸರು ಧಾಳಿ ನಡೆಸಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿರುವ ಘಟನೆ ಇಂದು ನಡೆದಿದೆ. ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದ ತೋಟವೊಂದರಲ್ಲಿ ಬೆಳೆಯಲಾಗಿದ್ದ ಹೊನ್ನೆ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸಲು ಯತ್ನಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಇಂದು ಮಧ್ಯಾಹ್ನ ಪೊಲೀಸರು ಧಾಳಿ ನಡೆಸಿದ್ದಾರೆ.ಗರಗಸದಿಂದ ಮರ ಕಡಿಯುತ್ತಿದ್ದ ಸಂದರ್ಭವೇ ಪೊಲೀಸರ ದಿಢೀರ್ ಧಾಳಿ ನಡೆದಿದ್ದು, ಇದರಿಂದ ಕಂಗಾಲಾದ ಖದೀಮರು ಗರಗಸ ಸಹಿತ ತೋಟದೊಳಗೆ ದಿಕ್ಕಾಪಾಲಾಗಿ ಓಡಿ ತಪ್ಪಿಸಿಕೊಂಡಿದ್ದಾರೆ. ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕೆ ತೆರಳಿದ ವಲಯ ಅರಣ್ಯಾಧಿಕಾರಿ ಮೊಹಿಸೀನ್ ಭಾಷ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಸುಮಾರು 8 ಸಾವಿರ ಮೌಲ್ಯದ ಮರವನ್ನು ವಶಕ್ಕೆ ಪಡೆದುಕೊಂಡು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.