ಮಡಿಕೇರಿ, ಏ. 4: ಮಾಲ್ದಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಾಸ್ತಾನು ಇರಿಸಲಾಗಿದ್ದ ಕಾಳುಮೆಣಸುವಿನಲ್ಲಿ ದುರುಪಯೋಗವಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾವೇರಿ ಸೇನೆ ಸಹಕಾರ ಸಂಘಗಳ ಉಪನಿಬಂಧಕರನ್ನು ಆಗ್ರಹಿಸಿದೆ.

ಉಪನಿಬಂಧಕರ ಕಚೇರಿಗೆ ಆಗಮಿಸಿದ ಕಾವೇರಿ ಸೇನೆ ಪದಾಧಿಕಾರಿಗಳು ಉಪನಿಬಂಧಕ ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮಾಲ್ದಾರೆ ಸಹಕಾರ ಸಂಘದ ಗೋದಾಮಿನಲ್ಲಿ 4 ಸಾವಿರ ಚೀಲದಷ್ಟು ಕಾಳುಮೆಣಸನ್ನು ಬೆಳೆಗಾರರು ದಾಸ್ತಾನು ಇರಿಸಿದ್ದು, ಈ ಪೈಕಿ 105 ಚೀಲ ಕಳವಾಗಿದೆ. ಈ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದರೂ, ಮುಚ್ಚಿ ಹಾಕಲು ಯತ್ನಿಸಲಾಗಿದೆ. ಇದರಲ್ಲಿ ಸಂಘದ ಅಧ್ಯಕ್ಷರ ಪಾಲುದಾರಿಕೆ ಕೂಡ ಇದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಆಡಳಿತ ಮಂಡಳಿಯನ್ನು ವಜಾಗೊಳಿಸಿ ಕ್ರಮ ಕೈಗೊಳ್ಳಬೇಕು. ಮುಂದಿನ 7 ದಿನಗಳೊಳಗೆ ಕ್ರಮಕೈಗೊಳ್ಳದಿದ್ದಲ್ಲಿ ಸಹಕಾರ ಸಂಘಕ್ಕೆ ಮುತ್ತಿಗೆ ಹಾಕುವದಲ್ಲದೆ, ಕಚೇರಿ ಎದುರು ಧರಣಿ ನಡೆಸುವದಾಗಿ ಹೇಳಿದರು.