ಕುಶಾಲನಗರ, ಏ. 4: ಹಲವು ಬೇಡಿಕೆಗಳನ್ನು ಮುಂದಿಟ್ಟು ಲಾರಿ ಮಾಲೀಕರು ಮತ್ತು ಚಾಲಕರು ನಡೆಸುತ್ತಿರುವ ಮುಷ್ಕರ ಇದೀಗ 7ನೇ ದಿನಕ್ಕೆ ಕಾಲಿಟ್ಟಿದೆ. ಕುಶಾಲನಗರ ಕಾವೇರಿ ಲಾರಿ ಮಾಲೀಕರು ಚಾಲಕರ ಸಂಘ ಮತ್ತು ಮಿನಿ ಲಾರಿ ಮಾಲೀಕರ ಚಾಲಕರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಮುಷ್ಕರದ ಹಿನ್ನಲೆಯಲ್ಲಿ ಸರಕು ಸಾಗಾಟ ವಾಹನಗಳು ತಮ್ಮ ಸಂಚಾರ ಸ್ಥಗಿತ ಗೊಳಿಸಿ ಮಾರುಕಟ್ಟೆ ಆವರಣದಲ್ಲಿ ನಿಲುಗಡೆಗೊಂಡಿರುವ ದೃಶ್ಯ ಕಾಣಬಹುದು. ಮಂಗಳವಾರ ಮುಷ್ಕರದಲ್ಲಿ ಪಾಲ್ಗೊಂಡ ಲಾರಿ ಚಾಲಕರು, ಮಾಲೀಕರು ಪಟ್ಟಣದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ತೆರಳಿ ಸರಕಾರದ ಧೋರಣೆ ವಿರುದ್ಧ ಘೋಷಣೆ ಕೂಗಿದರು. ನಂತರ ಕುಶಾಲನಗರದ ನಾಡಕಛೇರಿಯ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಕುಶಾಲನಗರ ಮೂಲಕ ಹಾದು ಹೋಗುವ ಎಲ್ಲಾ ಸರಕು ಸಾಗಾಟ ವಾಹನಗಳ ಓಡಾಟಕ್ಕೆ ಸ್ಥಳೀಯ ಸಂಘದ ಸದಸ್ಯರು ತಡೆಯೊಡ್ಡುತ್ತಿದ್ದು ಈ ಹಿನ್ನಲೆಯಲ್ಲಿ ಬಹುತೇಕ ವ್ಯಾಪಾರ ವಹಿವಾಟಿನಲ್ಲಿ ಏರುಪೇರು ಉಂಟಾಗಿದೆ. ಕುಶಾಲನಗರ ಸಂತೆ ಮಾರುಕಟ್ಟೆಗೆ ತರಬೇಕಾದ ಸಾಮಾನು ಸರಂಜಾಮುಗಳು ಕೂಡ ಸಾಗಿಸಲು ಅನಾನುಕೂಲವಾಗಿದ್ದು ಸಂತೆಯಲ್ಲಿ ವ್ಯಾಪಾರಿಗಳು ಕೂಡ ವಿರಳವಾಗಿದ್ದು ತರಕಾರಿ ಮತ್ತಿತರ ವಸ್ತುಗಳಲ್ಲಿ ಬೆಲೆ ಏರಿಕೆ ಉಂಟಾಗಿದೆ.

ಲಾರಿ ಮುಷ್ಕರಕ್ಕೆ ಬೆಂಬಲ

ಸಿದ್ದಾಪುರ: ಲಾರಿ ಚಾಲಕರು ಮತ್ತು ಮಾಲಿಕರು ನಡೆಸುತ್ತಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕೊಡಗು ಜಿಲ್ಲಾ ವಾಣಿಜ್ಯ ವಾಹನ ಚಾಲಕರ ಸಂಘ (ಸಿಐಟಿಯು)ದ ಸಂಪೂರ್ಣ ಬೆಂಬಲ ಇರುವದಾಗಿ ಸಂಘದ ಕಾರ್ಯದರ್ಶಿ ಅನಿಲ್ ಕುಟ್ಟಪ್ಪ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಜನ ವಿರೋಧಿ ವಾಹನ ನೀತಿಯು ಮುಂದಿನ ದಿನಗಳಲ್ಲಿ ನಾಗರೀಕರಿಗೆ ಹೊರೆಯಾಗುವದಲ್ಲದೆ ನಿತ್ಯೋಪಯೋಗಿ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿ ಜೀವನ ನಿರ್ವಹಣೆ ಕಷ್ಟ ಆಗಲಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಸರ್ಕಾರವು ಕಳೆದ ಸಾಲಿನಲ್ಲಿ ಮಿಮೆಯನ್ನು ಶೇಕಡ 30ರಷ್ಟು ಏರಿಕೆ ಮಾಡಿತ್ತು. ಇದೀಗ ಅದನ್ನು ಶೇಕಡ 50ಕ್ಕೆ ಏರಿಸಿ ವಾಹನ ಮಾಲೀಕರಿಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾಡಿದ್ದಾರೆ ಎಂದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ತಕ್ಷಣವೇ ವಿಮಾ ರಂಗವನ್ನು ಯಾವದೇ ನಿಯಂತ್ರಣ ವಿಲ್ಲದೆ ವಿದೇಶೀ ಬಂಡವಾಳ ಹೂಡಿಕೆದಾರರಿಗೆ ನೀಡಲಾಗಿದೆ. ಇದರಿಂದ ರಾಜ್ಯದ ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುವಂತಾಗಿದೆ ಎಂದರು. ಜನ ವಿರೋಧಿ ನೀತಿಯ ವಿರುದ್ಧ ಎಡ ಪಕ್ಷಗಳು ತೀವ್ರವಾಗಿ ಪ್ರತಿಭಟನೆ ಮಾಡಿದ್ದರೂ ಅದನ್ನು ಕೇಂದ್ರ ಸರ್ಕಾರ ತನ್ನ ಧೋರಣೆ ಯಿಂದ ಜನ ಸಾಮಾನ್ಯರಿಗೆ ಹೊರೆ ಯಾಗು ವಂತೆ ಮಾಡಿದೆ ಎಂದು ಆರೋಪಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ ಮೂರು ವರ್ಷಗಳಲ್ಲಿ ಹತ್ತಕ್ಕೂ ಅಧಿಕ ಬಾರಿ ಏರಿಕೆ ಮಾಡಿದ್ದು, ಇದೀಗ ವಿಮಾ ದರವನ್ನೂ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದರು.

ವಾಹನಗಳ ಗುಣ ಮಟ್ಟ ಪರಿಶೀಲನೆಗೆ (ಎಫ್.ಸಿ) ಒಂದು ದಿನ ವಿಳಂಬವಾದರೆ ರೂ. 50 ದಂಡ ವಿಧಿಸುವದಲ್ಲದೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸಿ.ಐ.ಟಿ.ಯು ಸಂಘಟನೆ ಖಂಡಿಸುತ್ತದೆ. ಕೂಡಲೇ ಈ ಕ್ರಮವನ್ನು ಹಿಂಪಡೆಯದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ಮಾಡಲು ತೀರ್ಮಾನಿ ಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ವಾಣಿಜ್ಯ ವಾಹನ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್, ಸದಸ್ಯ ಮಂಜು ಮತ್ತು ಸೈನುದ್ದೀನ್ ಇದ್ದರು.