ಸೋಮವಾರಪೇಟೆ, ಏ. 5: ಸಮೀಪದ ಕೂತಿ ಗ್ರಾಮದ ದೇವರ ಕಾಡು ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಕೂತಿನಾಡು ಸಬ್ಬಮ್ಮ ದೇವರ ಸಮಿತಿಯ ಆಡಳಿತ ಮಂಡಳಿಯವರು ಅರಣ್ಯ ಇಲಾಖೆಯ ವಲಯಾಧಿಕಾರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಅಧ್ಯಕ್ಷ ಕೆ.ಟಿ. ಜೋಯಪ್ಪ ಮತ್ತು ಪದಾಧಿಕಾರಿಗಳು ಮಾತನಾಡಿ, ದೇವರ ಕಾಡು ಒತ್ತುವರಿ ಬಗ್ಗೆ ಈಗಾಗಲೇ ಹಲವಾರು ಬಾರಿ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ದೇವರ ಕಾಡಿನ ಒಟ್ಟು 65 ಏಕರೆ ಪ್ರದೇಶದಲ್ಲಿ ಕೆಲವರು 25 ಏಕರೆ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಪ್ರಸಕ್ತ ಸಾಲಿನಲ್ಲಿ ಅರಣ್ಯ ಇಲಾಖೆಯವರು ದೇವರ ಕಾಡು ಒತ್ತುವರಿಯನ್ನು ತೆರವುಗೊಳಿಸದಿದ್ದರೆ ಸುಗ್ಗಿ ಹಬ್ಬವನ್ನು ಆಚರಿಸುವದಿಲ್ಲ. ಈ ಭಾಗದ ಧಾರ್ಮಿಕ, ಸಾಂಸ್ಕøತಿಕ ಉತ್ಸವದ ಆಚರಣೆ ಸ್ಥಗಿತಗೊಂಡರೆ ಅರಣ್ಯ ಇಲಾಖೆಯೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಇಲಾಖೆಯನ್ನು ಆಗ್ರಹಿಸಿದರು.

ಮನವಿ ಸಲ್ಲಿಕೆ ಸಂದರ್ಭ ಗ್ರಾಮಸ್ಥರಾದ ಪ್ರಕಾಶ್, ಪರಮೇಶ್, ಈರಪ್ಪ, ಸುರೇಶ್, ಬೆಟ್ಟದಕೊಪ್ಪ ಗ್ರಾಮಾಧ್ಯಕ್ಷ ಸಂದೇಶ್ ಮತ್ತಿತರರು ಪಾಲ್ಗೊಂಡಿದ್ದರು.