ಕುಶಾಲನಗರ, ಏ. 5: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮಪಂಚಾಯ್ತಿಯಿಂದ ವ್ಯಾಪ್ತಿಯಲ್ಲಿ ಪಂಚಾಯಿತಿ ಮಾಂಸ ಮಾರಾಟ ಮಳಿಗೆಗಳನ್ನು ನದಿ ತಟದಿಂದ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ. ಅವರು ಶಕ್ತಿಯೊಂದಿಗೆ ಮಾತನಾಡಿ, ನದಿ ತಟದ ಸ್ವಚ್ಛತೆ ಹಿನ್ನೆಲೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಕಳೆದ ಹಲವು ದಶಕಗಳಿಂದ ನದಿ ತಟಗಳಲ್ಲಿ ಕೋಳಿ, ಹಂದಿ, ಕುರಿ ಮಾಂಸದ ಮಳಿಗೆಗಳನ್ನು ತೆರೆಯುತ್ತಿದ್ದ ಹಿನ್ನೆಲೆ ನದಿಗೆ ರಕ್ತಮಿಶ್ರಿತ ತ್ಯಾಜ್ಯಗಳು ಸೇರಿ ನದಿ ಮಾಲಿನ್ಯಗೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕುಶಾಲನಗರ-ಹಾಸನ ಹೆದ್ದಾರಿ ಬದಿಯಲ್ಲಿ ಕೂಡುಮಂಗಳೂರು ಮತ್ತು ಕೂಡಿಗೆ ಗ್ರಾಮ ಪಂಚಾಯಿತಿ ಪ್ರತೀ ವರ್ಷ ಟೆಂಡರ್ ಕರೆದು ಬಿಡ್ಡುದಾರರಿಗೆ ನದಿ ತಟದಲ್ಲಿ ಮಳಿಗೆ ತೆರೆಯಲು ಅವಕಾಶ ಕಲ್ಪಿಸಿರುವದನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತ ನೋಟಿಸ್ ನೀಡಿ ಮಳಿಗೆಗಳನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಲಾಗಿತ್ತು.

ಈ ಸಂಬಂಧ ಗ್ರಾಮ ಪಂಚಾಯಿತಿ ಆಡಳಿತ ಯಾವದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಮಾಂಸ ಮಳಿಗೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಕೂಡ ಮುಂದಾಗಿದ್ದರು.

ಏಪ್ರಿಲ್ 1 ರಿಂದ ನದಿ ತಟದ ಮಾಂಸದ ಮಳಿಗೆಗಳನ್ನು ತೆರವುಗೊಳಿಸಲು ಪಂಚಾಯಿತಿ ಅಧಿಕಾರಿಗಳು ಸೂಚನೆ ನೀಡಿದರೂ ಇದಕ್ಕೆ ಸ್ಪಂದಿಸದ ವ್ಯಾಪಾರಿಗಳು ಅದೇ ಸ್ಥಳದಲ್ಲಿ ಮಾಂಸ ಮಾರಾಟ ಮುಂದುವರೆಸಿದ ಕಾರಣ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಇದೀಗ ತೆರವುಗೊಳಿಸುವಲ್ಲಿ ಯಶಸ್ಸು ಕಂಡಿದೆ.

ಮುಂದಿನ ದಿನಗಳಲ್ಲಿ ನದಿ ತಟದಿಂದ 500 ಮೀ ವ್ಯಾಪ್ತಿಯಲ್ಲಿ ನದಿ ಮಾಲಿನ್ಯಗೊಳ್ಳುವ ಯಾವದೇ ಘಟಕಗಳಿಗೆ ಅನುಮತಿ ಕಲ್ಪಿಸುವದಿಲ್ಲ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್ ಹಾಗೂ ಪಂಚಾಯ್ತಿ ಸದಸ್ಯರಾದ ರವಿ ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ಭರವಸೆ ನೀಡಿದ್ದಾರೆ.