ಮಡಿಕೇರಿ, ಏ. 5: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೂರ್ನಾಡು ಫ್ರೆಂಡ್ಸ್ ಕ್ರಿಕೆಟರ್ಸ್ ಸಂಯುಕ್ತಾಶ್ರಯದಲ್ಲಿ ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ತಾ. 9 ರಂದು ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಅಂದು ಬೆಳಗ್ಗೆ 9.30ಕ್ಕೆ ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು ಚಾಲನೆ ನೀಡಲಿದ್ದಾರೆಂದು ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಪತ್ರಕರ್ತರ ಒಕ್ಕೂಟ ಸದಸ್ಯ ಬಿ.ಎಸ್. ಲೋಕೇಶ್‍ಸಾಗರ್ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್, ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಣ್ಣುವಂಡ ಎಂ. ಚಂಗಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಬಾಚರಣಿಯಂಡ ಅನು ಕಾರ್ಯಪ್ಪ, ಎಸ್.ಐ. ಮುರಳೀಧರ್, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 6 ಗಂಟೆಗೆ ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ಸವಿತಾ ರೈ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್, ಸಿದ್ದಾಪುರದ ಪತ್ರಕರ್ತ ಅಂಚೆಮನೆ ಸುಧಿಕುಮಾರ್ ಪಾಲ್ಗೊಳ್ಳಲಿದ್ದಾರೆ. ವಿಜೇತ ತಂಡಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಟ್ರೋಫಿ ವಿತರಿಸಲಿದ್ದಾರೆ. ನಗದು ಬಹುಮಾನವನ್ನು ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಕೃಷಿಕ ಚೆಟ್ಟಿಮಾಡ ಅಮರ್, ಉದ್ಯಮಿ ಪೃಥ್ವಿ ಹರೀಶ್, ಮಾಜಿ ಯೋಧ ದೀಪಕ್ ಬಹುಮಾನ ವಿತರಿಸಲಿದ್ದಾರೆ.

ಅಂತಿಮ ಪಂದ್ಯವನ್ನು ಜಯ ಕರ್ನಾಟಕ ಜಿಲ್ಲಾಧ್ಯಕ್ಷ ರಾಬಿನ್ ಕುಟ್ಟಪ್ಪ ಉದ್ಘಾಟಿಸಲಿದ್ದಾರೆ. ಪ್ರದರ್ಶನ ಪಂದ್ಯವನ್ನು ಉದ್ಯಮಿ ಕೆರೆಮನೆ ಭರತ್, ಕೃಷಿಕ ಕೋಟೇರ ಸಚಿನ್ ಉದ್ಘಾಟಿಸಲಿದ್ದಾರೆ.

ಸುವರ್ಣ ಮಂಜು ನಾಯಕತ್ವದ ಮೀಡಿಯಾ ಇಲೆವನ್, ಕುಡೆಕಲ್ ಸಂತೋಷ್ ನಾಯಕತ್ವದ ಟೀಂ ಕೋಬ್ರಾ, ಪಳೆಯಂಡ ಪಾರ್ಥ ಚಿಣ್ಣಪ್ಪ ನಾಯಕತ್ವದ ಸೌತ್ ಟೈಗರ್ಸ್, ವಿಜಯ ಹಾನಗಲ್ಲು ನಾಯಕತ್ವದ ನಾರ್ತ್ ಲಯನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ವಿ. ರವಿಕುಮಾರ್ ನಾಯಕತ್ವದ ಹಿರಿಯ ಪತ್ರಕರ್ತರ ತಂಡ ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಪ್ರದೀಪ್‍ಕುಮಾರ್ ನಾಯಕತ್ವದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.

ಪ್ರತಿ ಪಂದ್ಯ 6 ಒವರ್ ಸೀಮಿತವಾಗಿರುತ್ತದೆ. ಒಂದು ತಂಡದಲ್ಲಿ ಕನಿಷ್ಟ 5 ಬೌಲರ್‍ಗಳು ಇರಬೇಕಾಗುತ್ತದೆ. ಫೈನಲ್ ಪಂದ್ಯ 8 ಒವರ್‍ಗಳಿಗೆ ಸೀಮಿತವಾಗಿರುತ್ತದೆ. ಲೀಗ್ ಪಂದ್ಯಾಟವಾಗಿದ್ದು, ಗೆದ್ದವರಿಗೆ 2 ಅಂಕ, ಟೈ ಆದಲ್ಲಿ ಎರಡು ತಂಡಗಳಿಗೆ ತಲಾ 1 ಅಂಕ ನೀಡಲಾಗುತ್ತದೆ. ಅಂಕ ಪಟ್ಟಿಯಲ್ಲಿ ಪ್ರಥಮ ಎರಡು ಸ್ಥಾನ ಪಡೆಯುವ ತಂಡಗಳ ನಡುವೆ ಅಂತಿಮ ಪಂದ್ಯ ನಡೆಯಲಿದೆ.

ಪತ್ರಕರ್ತರ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಕ್ಕೆ ಮೂರ್ನಾಡಿನ ಫ್ರೆಂಡ್ಸ್ ಕ್ರಿಕೆಟರ್ಸ್‍ನ ಪುದಿಯೊಕ್ಕಡ ರಮೇಶ್, ಸುರೇಶ್ ಮುತ್ತಪ್ಪ ಟಿ ಶರ್ಟ್ ವಿತರಿಸಿದರು.